ಬೆಂಗಳೂರು, 13ಡಿಸೆಂಬರ್(ಹಿ.ಸ):
ಆ್ಯಂಕರ್ :
‘ಕಾಂತಾರ: ಚಾಪ್ಟರ್ 1’ ಚಿತ್ರದ ಮೊದಲ ಪೋಸ್ಟರ್ ಇತ್ತೀಚೆಗೆ ಅನಾವರಣಗೊಂಡಿತ್ತು. ರಿಷಬ್ ಶೆಟ್ಟಿ ಅವತಾರ ನೋಡಿ ಅಭಿಮಾನಿಗಳು ರೋಮಾಂಚನಗೊಂಡಿದ್ದರು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ರಿಷಬ್ ಶೆಟ್ಟಿ ಈ ಮೊದಲೇ ಘೋಷಣೆ ಮಾಡಿದ್ದರು. ಅವರು ಹೇಳಿದಂತೆ ನಡೆದುಕೊಂಡಿದ್ದಾರೆ. ‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ನಟಿಸೋಕೆ ಕಲಾವಿದರ ಅವಶ್ಯಕತೆ ಇದೆ. ಈ ಕುರಿತು ಕಾಲ್ಫಾರ್ ಮಾಡಲಾಗಿದೆ. ಈ ಅವಕಾಶವನ್ನು ಪಡೆಯಬೇಕು ಎಂದು ಇಚ್ಛಿಸಿದವರಿಗೆ ವಯಸ್ಸಿನ ಮಿತಿ ಇದೆ.
‘ಕಾಂತಾರ’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಸೂಪರ್ ಹಿಟ್ ಎನಿಸಿಕೊಂಡಿತು. ಈಗ ಈ ಚಿತ್ರಕ್ಕೆ ಪ್ರೀಕ್ವೆಲ್ ಸಿದ್ಧವಾಗುತ್ತಿದೆ. 2024ರ ಆರಂಭದಲ್ಲಿ ಸಿನಿಮಾ ಕೆಲಸ ಪ್ರಾರಂಭ ಆಗಲಿದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಹೀರೋ ಪಾತ್ರ ಮಾಡುತ್ತಿದ್ದಾರೆ. ಉಳಿದ ಪಾತ್ರಕ್ಕೆ ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಪಾತ್ರಗಳ ಆಯ್ಕೆ ಪ್ರಕ್ರಿಯೆಗೆ ಹೊಂಬಾಳೆ ಫಿಲ್ಮ್ಸ್ ಚಾಲನೆ ನೀಡಿದೆ.
‘ಕಲಾವಿದರು ಬೇಕಾಗಿದ್ದಾರೆ’ ಎಂದು ಹೊಂಬಾಳೆ ಫಿಲ್ಮ್ಸ್ ಪೋಸ್ಟರ್ ಹಂಚಿಕೊಂಡಿದೆ. ಪುರುಷರ ವಯಸ್ಸು 30ರಿಂದ 60 ವರ್ಷ ಅಂತರದಲ್ಲಿ ಹಾಗೂ ಮಹಿಳೆಯರ ವಯಸ್ಸು 18ರಿಂದ 60 ವರ್ಷ ಅಂತರದಲ್ಲಿ ಇರಬೇಕು. ನೋಂದಣಿ ಮಾಡಲು kantara.film ಗೆ ಭೇಟಿ ನೀಡಬೇಕು. 14 ಡಿಸೆಂಬರ್ವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ. ಮತ್ತೊಂದು ವಿಶೇಷ ಸೂಚನೆಯನ್ನು ಕೂಡ ನೀಡಲಾಗಿದೆ. ರೀಲ್ಸ್ ಮತ್ತು ಅವುಗಳನ್ನೇ ಹೋಲುವ ವಿಡಿಯೋಗಳಿದ್ದರೆ ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೊಂಬಾಳೆ ಫಿಲ್ಮ್ಸ್ ಕಟ್ಟುನಿಟ್ಟಾಗಿ ಹೇಳಿದೆ.
ಹಿಂದೂಸ್ತಾನ್ ಸಮಾಚಾರ್
