ರಾಣಿಪೂಲ್, 11 ಫೆಬ್ರವರಿ :
ಆ್ಯಂಕರ್:
ಹಾಲಿನ ಟ್ಯಾಂಕರ್ವೊಂದು ಮೂರು ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಸಿಕ್ಕಿಂನಲ್ಲಿ ನಡೆದಿದೆ. ಸಿಕ್ಕಿಂನ ರಾಣಿಪೂಲ್ ನಲ್ಲಿ ಜಾತ್ರೆಯೊಂದು ನಡೆಯುತ್ತಿದ್ದು, ಅಲ್ಲಿ ಸಾಕಷ್ಟು ಮಂದಿ ಜನರು ಆಗಮಿಸಿದ್ದರು. ಡಿಕ್ಕಿಯ ರಭಸಕ್ಕೆ ಆ ಪ್ರದೇಶದಲ್ಲಿದ್ದ ಜನರು ವಾಹನಗಳಡಿ ಸಿಲುಕಿ ನುಜ್ಜುಗುಜ್ಜಾಗಿದ್ದಾರೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಟ್ಯಾಂಕರ್ ಒಂದು ಕಾರುಗಳಿಗೆ ಡಿಕ್ಕಿ ಹೊಡೆದ ತಕ್ಷಣವು ಆ ವಾಹನಗಳು ಜಾತ್ರೆ ನಡೆಯುತ್ತಿದ್ದ ಮೈದಾನದೊಳಗೆ ನುಗ್ಗಿತ್ತು. ಘಟನೆಯಲ್ಲಿ ಜನರು ವಾಹನದಡಿ ಸಿಲುಕಿಕೊಂಡ ಜನರನ್ನು ಹೊರತೆಗೆಯಲು ಹರಸಾಹಸ ಪಟ್ಟಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಹಾಲಿನ ಟ್ಯಾಂಕರ್ ಬ್ರೇಕ್ ಫೇಲ್ ಆಗಿದ್ದರಿಂದ, ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಸೆಂಟ್ರಲ್ ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
