ಮುಂಬೈ, 27 ಜನವರಿ:
ಭಾರತದ ಫಾರೀನ್ ಎಕ್ಸ್ಚೇಂಜ್ ರಿಸರ್ವ್ಸ್ ಜನವರಿ 19ರಂದು ಅಂತ್ಯಗೊಂಡ ವಾರದಲ್ಲಿ 2.79 ಬಿಲಿಯನ್ ಡಾಲರ್ನಷ್ಟು ಇಳಿಕೆಯಾಗಿದೆ. ಇದರೊಂದಿಗೆ ವಿದೇಶೀ ವಿನಿಮಯ ಮೀಸಲು ನಿಧಿ 616.14 ಬಿಲಿಯನ್ ಡಾಲರ್ಗೆ ಇಳಿದಿರುವುದು ಆರ್ಬಿಐ ಬಿಡುಗಡೆ ಮಾಡಿದ ದತ್ತಾಂಶದಿಂದ ಗೊತ್ತಾಗಿದೆ. ಕಳೆದ ವಾರ ಫಾರೆಕ್ಸ್ ಮೀಸಲು ನಿಧಿ 1.6 ಬಿಲಿಯನ್ ಡಾಲರ್ನಷ್ಟು ಏರಿತ್ತು.
ಜನವರಿ 19ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ ನಿಧಿಯ ಭಾಗವಾಗಿರುವ ಫಾರೀನ್ ಕರೆನ್ಸಿ ಆಸ್ತಿ, ಗೋಲ್ಡ್ ನಿಧಿ, ಎಸ್ಡಿಆರ್ ಮತ್ತು ಐಎಂಎಫ್ನೊಂದಿಗಿನ ರಿಸರ್ವ್ ಪ್ರಮಾಣ ಇವಿಷ್ಟೂ ಕೂಡ ಇಳಿಕೆಯಾಗಿವೆ.
ಫಾರೆಕ್ಸ್ನ ಪ್ರಮುಖ ಭಾಗವಾಗಿರುವ ಫಾರೀನ್ ಕರೆನ್ಸಿ ಆಸ್ತಿ 2.6 ಬಿಲಿಯನ್ ಡಾಲರ್ನಷ್ಟು ಇಳಿಕೆಯಾಗಿದೆ. ಚಿನ್ನದ ಮೀಸಲು ನಿಧಿ 34 ಮಿಲಿಯನ್ನಷ್ಟು ತಗ್ಗಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ಸ್ 476 ಮಿಲಿಯನ್ ಡಾಲರ್ ಕಡಿಮೆ ಆಗಿದೆ. ಐಎಂಎಫ್ ರಿಸರ್ವ್ ಪ್ರಮಾಣ 18 ಮಿಲಿಯನ್ ಡಾಲರ್ನಷ್ಟು ಕುಗ್ಗಿದೆ.
ಜನವರಿ 19ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ ವಿವರ
ಒಟ್ಟು ನಿಧಿ: 616.14 ಬಿಲಿಯನ್ ಡಾಲರ್
ವಿದೇಶೀ ಕರೆನ್ಸಿ ಆಸ್ತಿನ (ಎಫ್ಸಿಎ): 545.8 ಬಿಲಿಯನ್ ಡಾಲರ್
ಗೋಲ್ಡ್ ರಿಸರ್ವ್ಸ್: 47.2 ಬಿಲಿಯನ್ ಡಾಲರ್
ಸ್ಪೆಷಲ್ ಡ್ರಾಯಿಂಗ್ ರೈಟ್ಸ್: 18.2 ಬಿಲಿಯನ್ ಡಾಲರ್
ಐಎಂಎಫ್ನೊಂದಿಗಿನ ನಿಧಿ: 4.85 ಬಿಲಿಯನ್ ಡಾಲರ್.
ಫಾರೀನ್ ಕರೆನ್ಸಿ ಅಸೆಟ್ಸ್ ಎಂಬುದು ಅಮೆರಿಕದ ಡಾಲರ್ ಅಲ್ಲದ ಕರೆನ್ಸಿಗಳ ಬೆಲೆಯ ಮೇಲೆ ಆಧಾರಿತವಾಗಿರುತ್ತದೆ. ಉದಾಹರಣೆಗೆ, ಭಾರತ ಹೊಂದಿರುವ ಯೂರೋ, ಪೌಂಡ್, ಯೆನ್ ಮೊದಲಾದ ಕರೆನ್ಸಿಗಳ ಮೌಲ್ಯದ ಮೊತ್ತ ಎಫ್ಸಿಎ ಆಗಿರುತ್ತದೆ.
2021ರ ಅಕ್ಟೋಬರ್ ತಿಂಗಳಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ ಮೊತ್ತ 645 ಬಿಲಿಯನ್ ಡಾಲರ್ ಮಟ್ಟ ತಲುಪಿತ್ತು. ಅದು ಭಾರತದ ಸಾರ್ವಕಾಲಿಕ ಗರಿಷ್ಠ ಫಾರೆಕ್ಸ್ ನಿಧಿ ಎನಿಸಿದೆ. ಅದಾದ ಬಳಿಕ ರುಪಾಯಿ ಮೌಲ್ಯ ಕುಸಿತ ನಿಯಂತ್ರಿಸಲು ಆರ್ಬಿಐ ಫಾರೆಕ್ಸ್ ಪೇಟೆಯಲ್ಲಿ ಒಂದಷ್ಟು ಕ್ರಮಗಳನ್ನು ಕೈಗೊಂಡ ಪರಿಣಾಮವಾಗಿ ನಿಧಿಯ ಪ್ರಮಾಣ ಕಡಿಮೆ ಆಗುತ್ತಾ ಬಂದಿತ್ತು. ಕಳೆದ ಕೆಲ ತಿಂಗಳಿಂದ ಫಾರೆಕ್ಸ್ ನಿಧಿ ತುಸು ಮೇಲೇರಿದೆ.
