ನವದೆಹಲಿ, 23 ಫೆಬ್ರವರಿ :
ಆ್ಯಂಕರ್:
ಭಾರತದಲ್ಲಿ ಮಾರ್ಚ್ 31ರವರೆಗೂ ಈರುಳ್ಳಿ ರಫ್ತಿಗೆ ನಿರ್ಬಂಧ ಹೇರಲಾಗಿದೆ. ಈ ನಡುವೆ ಕೆಲ ದೇಶಗಳಿಗೆ ಸೀಮಿತ ಪ್ರಮಾಣದಲ್ಲಿ ಈರುಳ್ಳಿ ರಫ್ತಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈರುಳ್ಳಿ ವರ್ತಕರಿಗೆ 54,716 ಟನ್ಗಳಷ್ಟು ಪ್ರಮಾಣದಲ್ಲಿ ರಫ್ತು ಮಾಡಲು ಗುರುವಾರ ಅನುಮತಿಸಿದೆ. ಬಾಂಗ್ಲಾದೇಶ, ಮಾರಿಷಸ್, ಬಹರೇನ್ ಮತ್ತು ಭೂತಾನ್ ದೇಶಗಳಿಗೆ ಮಾರ್ಚ್ 31ರವರೆಗೂ ನಿಗದಿತ ಮೊತ್ತದಷ್ಟು ಈರುಳ್ಳಿ ರಫ್ತು ಮಾಡಬಹುದಾಗಿದೆ. ಬಾಂಗ್ಲಾದೇಶಕ್ಕೆ ಹೆಚ್ಚಿನ ಈರುಳ್ಳಿ ರಫ್ತಾಗಲಿದೆ. ವರದಿ ಪ್ರಕಾರ ಬಾಂಗ್ಲಾದೇಶವೊಂದಕ್ಕೆ 50,000 ಟನ್ ಈರುಳ್ಳಿ ರಫ್ತಿಗೆ ಅವಕಾಶ ಕೊಡಲಾಗಿದೆ.
ಇನ್ನು, ಮಾರಿಷಸ್, ಬಹರೇನ್ ಮತ್ತು ಭೂತಾನ್ ದೇಶಗಳಿಗೆ ಕ್ರಮವಾಗಿ 1,200 ಟನ್, 3,000 ಟನ್ ಮತ್ತು 560 ಟನ್ಗಳಷ್ಟು ಈರುಳ್ಳಿ ರಫ್ತಿಗೆ ಅನುಮೋದನೆ ಕೊಡಲಾಗಿದೆ. ಇಂದು ಗುರುವಾರ ಈ ಕ್ರಮ ಪ್ರಕಟಿಸಲಾಗಿದ್ದು ತತ್ಕ್ಷಣದಿಂದಲೇ ಜಾರಿಗೆ ಬರುತ್ತದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಮಾರ್ಚ್ 31ರವರೆಗೆ ನಿರ್ದಿಷ್ಟಪಡಿಸಲಾದ ಮೊತ್ತದ ಈರುಳ್ಳಿಯನ್ನು ರಫ್ತು ಮಾಡಲು ವರ್ತಕರಿಗೆ ಅನುಮತಿಸಲಾಗಿದೆ. ಯಾವ ರೀತಿಯಲ್ಲಿ ರಫ್ತು ಮಾಡಬೇಕು ಎಂಬುದನ್ನು ಅವಲೋಕಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ವಿದೇಶಾಂಗ ಸಚಿವಾಲಯದ ಶಿಫಾರಸಿನ ಮೇರೆಗೆ ಕೆಲ ದೇಶಗಳಿಗೆ ಈರುಳ್ಳಿ ಸರಬರಾಜು ಮಾಡುವ ಅವಕಾಶ ನೀಡಲಾಗಿರುವುದು ತಿಳಿದುಬಂದಿದೆ. ಭಾರತದಲ್ಲಿ ಈರುಳ್ಳಿ ಅಭಾವ ಸೃಷ್ಟಿಯಾಗುವ ಅಪಾಯ ಎದುರಾಗಲಿದ್ದು, ಈ ಸಂದರ್ಭದಲ್ಲಿ ಈ ಬೆಳವಣಿಗೆ ಆಗಿದೆ.
