ಮುಂಬೈ,6 ಡಿಸೆಂಬರ್(ಹಿ.ಸ):
ಆ್ಯಂಕರ್ : ಭಾರತ ಇನ್ನು ಏಳೆಂಟು ವರ್ಷದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ ಎಂದು ಎಸ್ ಮತ್ತು ಪಿ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆ ಅಂದಾಜು ಮಾಡಿದೆ. ಸ್ಟಾಂಡರ್ಡ್ ಅಂಡ್ ಪೂರ್ ಸಂಸ್ಥೆಯ ಪ್ರಕಾರ ಭಾರತದ ಜಿಡಿಪಿ ವೃದ್ಧಿ ದರ 2026-27ರಲ್ಲಿ ಶೇ. 7ಕ್ಕೆ ಮುಟ್ಟಲಿದೆ. ಅಲ್ಲಿಯವರೆಗೂ ಶೇ. 6.4ರಿಂದ ಶೇ. 6.9ರ ದರದಲ್ಲಿ ಜಿಡಿಪಿ ಬೆಳೆಯಲಿದೆ ಎನ್ನಲಾಗಿದೆ.
‘ಭಾರತ 2030ರೊಳಗೆ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ. ಮುಂದಿನ ಮೂರು ವರ್ಷದಲ್ಲಿ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತ ಅತಿವೇಗವಾಗಿ ಬೆಳವಣಿಗೆ ಸಾಧಿಸಬಹುದು ಎಂದು ನಿರೀಕ್ಷಿಸಿದ್ದೇವೆ,’ ಎಂದು ಎಸ್ & ಪಿ ಸಂಸ್ಥೆ ಹೇಳಿದೆ.
ಭಾರತ ಸದ್ಯ ಐದನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿದೆ. ಅಮೆರಿಕ ಮತ್ತು ಚೀನಾದ ಜಿಡಿಪಿ ಬಹಳ ದೊಡ್ಡದಿದೆ. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಜರ್ಮನಿ ಮತ್ತು ಜಪಾನ್ ದೇಶದ ಆರ್ಥಿಕತೆಗಳಿವೆ. ಆದರೆ, ಜಿಡಿಪಿ ಗಾತ್ರದಲ್ಲಿ ಜರ್ಮನಿ, ಜಪಾನ್ ಮತ್ತು ಭಾರತದ ಮಧ್ಯೆ ಅಷ್ಟೇನೂ ವ್ಯತ್ಯಾಸಗಳಿಲ್ಲ. ಭಾರತ ಇದೇ ವೇಗದಲ್ಲಿ ಆರ್ಥಿಕತೆಯ ವೇಗ ಮುಂದುವರಿಸಿದರೆ ಕೆಲವೇ ವರ್ಷಗಳಲ್ಲಿ ಜರ್ಮನಿ, ಜಪಾನ್ ಜಿಡಿಪಿಯನ್ನು ಸಹಜವಾಗಿ ಮೀರಿಸಬಹುದು. ಕೆಲ ಸಂಸ್ಥೆಗಳು 2027ರಲ್ಲೇ ಇದು ಸಾಧ್ಯವಾಗಬಹುದು ಎಂದು ನಿರೀಕ್ಷಿಸಿರುವುದುಂಟು.
ಹಿಂದೂಸ್ತಾನ್ ಸಮಾಚಾರ್
