ದೆಹಲಿ, 13ಡಿಸೆಂಬರ್(ಹಿ.ಸ):
ಆ್ಯಂಕರ್ :
ಭಾರತದ ಗ್ರಾಹಕ ಬೆಲೆ ಅನುಸೂಚಿ ಆಧಾರಿತ ಹಣದುಬ್ಬರ ಅಥವಾ ರೀಟೇಲ್ ಹಣದುಬ್ಬರ ನವೆಂಬರ್ ತಿಂಗಳಲ್ಲಿ ಶೇ. 5.55ರಷ್ಟು ಏರಿದೆ. ಕೇಂದ್ರ ಸಾಂಖ್ಯಿಕ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಆಹಾರವಸ್ತುಗಳ ಬೆಲೆ ಏರಿಕೆ ಪರಿಣಾಮವಾಗಿ ಚಿಲ್ಲರೆ ಮಾರಾಟ ಹಣದುಬ್ಬರ ಗಣನೀಯವಾಗಿ ಹೆಚ್ಚಾಗಿದೆ. ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ಶೇ. 4.87ರಷ್ಟಿತ್ತು. ಆದರೆ, ಕಳೆದ ವರ್ಷದ ನವೆಂಬರ್ನಲ್ಲಿ ಶೇ. 5.88ಕ್ಕೆ ಹೋಲಿಸಿದರೆ ಈ ಬಾರಿ ಹಣದುಬ್ಬರ ತುಸು ಕಡಿಮೆ ಆಗಿದೆ.
ನವೆಂಬರ್ನಲ್ಲಿ ಗ್ರಾಮೀಣ ಭಾಗದಲ್ಲಿ ಹಣದುಬ್ಬರ ಶೇ. 5.85ರಷ್ಟು ಇದ್ದರೆ, ನಗರ ಭಾಗದಲ್ಲಿ ಹಣದುಬ್ಬರ ಶೇ. 5.26ರಷ್ಟು ಇದೆ ಎಂದು ಸಾಂಖ್ಯಿಕ ಇಲಾಖೆಯ ವರದಿಯಲ್ಲಿ ತಿಳಿಸಲಾಗಿದೆ.
ನವೆಂಬರ್ನಲ್ಲಿ ಹಣದುಬ್ಬರ ಶೇ. 6ರ ಗಡಿ ದಾಟಬಹುದು ಎಂದು ಕೆಲ ಆರ್ಥಿಕ ತಜ್ಞರು ನಿರೀಕ್ಷಿಸಿದ್ದರು. ಈರುಳ್ಳಿ, ಟೊಮೆಟೋ ಬೆಲೆ ಏರಿಕೆಯಿಂದಾಗಿ ಹಣದುಬ್ಬರ ನಿರೀಕ್ಷೆಮೀರಿ ಹೆಚ್ಚಬಹುದು ಎನ್ನಲಾಗಿತ್ತು. ಆದರೆ, ಹಣದುಬ್ಬರ ದರ ಶೇ. 6ಕ್ಕಿಂತಲೂ ಕಡಿಮೆ ಇದೆ.
ರಿಸರ್ವ್ ಬ್ಯಾಂಕ್ ಹಣದುಬ್ಬರವನ್ನು ಶೇ. 4ಕ್ಕೆ ತಂದು ನಿಲ್ಲಿಸುವ ಗುರಿ ಇಟ್ಟಿದೆ. ಶೇ. 2ರಿಂದ 6 ಅನ್ನು ಹಣದುಬ್ಬರ ತಾಳಿಕೆ ಮಿತಿ ಎಂದು ನಿಗದಿ ಮಾಡಿದೆ. ನವೆಂಬರ್ನ ಹಣದುಬ್ಬರವು ಆರ್ಬಿಐನ ತಾಳಿಕೆ ಮಿತಿಗೆ ಸಮೀಪವೇ ಹೋಗಿದೆ.
ಹಿಂದೂಸ್ತಾನ್ ಸಮಾಚಾರ್
