
ಮಸ್ಕಿ, 17 ಜನವರಿ(ಹಿ.ಸ):
ಆ್ಯಂಕರ್ : ಜ.17ರಂದು ಮಸ್ಕಿ ತಾಲೂಕ ಆಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಮಕ್ಕಳ ರಕ್ಷಣ ಘಟಕ, ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆ ರವರ ಸಂಯೋಗದಲ್ಲಿ ಮಸ್ಕಿ ಪಟ್ಟಣದ ವಿವಿಧ ಹೋಟೆಲ್, ಗ್ಯಾರೇಜ್, ಬೇಕರಿ, ಅಂಗಡಿ, ಬಾರ್&ರೆಸ್ಟೋರೆಂಟ್ ಮತ್ತು ಇನ್ನಿತರೆ ಉದ್ದಿಮೆಗಳಲ್ಲಿ ತಪಾಸಣೆ ಮಾಡಿದಾಗ ಮಸ್ಕಿ ಪಟ್ಟಣದ “ಉಡುಪಿ ಐಶ್ವರ್ಯ ಹೋಟೆಲ್” ಕೆಲಸ ಮಾಡುತ್ತಿದ್ದ ಮಗುವನ್ನು ರಕ್ಷಣೆ ಮಾಡಿ, 9ನೇ ತರಗತಿಗೆ ದಾಖಲು ಮಾಡಿ, ಪಾಲಕರಿಗೆ ಒಪ್ಪಿಸಲಾಯಿತು. ಮಗುವನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದ “ಉಡುಪಿ ಐಶ್ವರ್ಯ ಹೋಟೆಲ್” ನ ಮಾಲೀಕರ ವಿರುದ್ಧ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಯಿತು.
ದಾಳಿಯ ತಂಡದಲ್ಲಿ ಮಸ್ಕಿ ತಹಶೀಲ್ದಾರ ಅರಮನೆ ಸುಧಾ, ಬಾಲಕಾರ್ಮಿ ಯೋಜನೆಯ ಯೋಜನಾಧಿಕಾರಿ ಮಂಜುನಾಥರೆಡ್ಡಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮುದುಕಪ್ಪ, ಮಸ್ಕಿ ಕಾರ್ಮಿಕ ನಿರೀಕ್ಷಕ ಶಾಂತಮೂರ್ತಿ, ಶಿಕ್ಷಣ ಇಲಾಖೆಯ ಸಿಆರ್ಪಿ ರಾಮಸ್ವಾಮಿ, ಪಾಲ್ಗೊಂಡಿದ್ದರು.
ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2016 ರಂತೆ 14 ವರ್ಷದೊಳಗಿನ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಹಾಗೂ 15 ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಒಂದು ವೇಳೆ ದುಡಿಸಿಕೊಂಡಲ್ಲಿ ರೂ. 50,000/- ದಂಡ ಹಾಗೂ 2 ವರ್ಷ ಜೈಲು ಶಿಕ್ಷೆ ಇರುತ್ತದೆ. ವಾಹನಗಳಲ್ಲಿ ಮಕ್ಕಳನ್ನು ಕೃಷಿ ಚಟುವಟಿಕೆಗಳಿಗಾಗಿ ಅಕ್ರಮ ಮತ್ತು ಕಾನೂನು ಬಾಹಿರವಾಗಿ ಸಾಗಾಣಿಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ, ಕಾರಣ ಮಕ್ಕಳನ್ನು ದುಡಿಸಿಕೊಳ್ಳಬಾರದು.
