
ನವದೆಹಲಿ,15ನವೆಂಬರ್ (ಹಿ.ಸ):
ಆ್ಯಂಕರ್ :
ಕೇಂದ್ರ ಸರ್ಕಾರದ ವಿವಿಧ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳ ಪ್ರಗತಿ ಮತ್ತು ಸಾಧನೆಯನ್ನು ಜನ ಸಾಮಾನ್ಯರಲ್ಲಿ ಪ್ರಚುರಪಡಿಸಿ ಅರಿವು ಮೂಡಿಸಲು ’ವಿಕಸಿತ ಭಾರತ್ ಸಂಕಲ್ಪ ಯಾತ್ರೆ’ಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ಜಾರ್ಖಂಡ್ನ ಕುಂತಿ ಜಿಲ್ಲೆಯಲ್ಲಿ ಉದ್ಘಾಟಿಸಲಿದ್ದಾರೆ. ಕರ್ನಾಟಕದಲ್ಲೂ ಈ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಮೈಸೂರಿನಲ್ಲಿ ಇಂದು ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಭಾಗವಾಗಿ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಂವಹನ ವಾಹನದೊಂದಿಗೆ ನಗರ ಮತ್ತು ಗ್ರಾಮಮಟ್ಟದಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಕುರಿತು ಪ್ರಚಾರ ಆಂದೋಲನ ನಡೆಸಲಿದ್ದಾರೆ. ದೇಶಾದ್ಯಂತ ಈ ಪ್ರಚಾರ ಆಂದೋಲನ ೨ ಲಕ್ಷದ ೭೦ ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ೩ ಸಾವಿರದ ೮೦೦ ನಗರ ಸ್ಥಳೀಯ ಸಂಸ್ಥೆಗಳ ೧೪ ಸಾವಿರ ಸ್ಥಳಗಳಲ್ಲಿ ನಡೆಯಲಿದೆ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಮಾಹಿತಿಯುಳ್ಳ ಕೈಪಿಡಿಯನ್ನು ಜನಸಾಮಾನ್ಯರಿಗೆ ವಿತರಿಸಿ, ಜಾಗೃತಿ ಮೂಡಿಸಲಾಗುವುದು. ಸಂವಹನ ವಾಹನದಲ್ಲಿ ಅಳವಡಿಸಿರುವ ಎಲ್ಇಡಿ ಪರದೆಯ ಮೂಲಕ ಮಾಹಿತಿಯುಳ್ಳ ಸಾಕ್ಷ್ಯಚಿತ್ರಗಳನ್ನು ಪ್ರಸಾರ ಮಾಡಲಾಗುವುದು. ಬೀದಿ ನಾಟಕ ಹಾಗೂ ಸಭೆಗಳ ಮೂಲಕವೂ ಸಹ ಅರಿವು ಮೂಡಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಕಾರ್ಯಕ್ರಮ ಜನವರಿ ೨೫ರವರೆಗೆ ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್
