ಧಾರವಾಡ, 06 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಪರೋಕ್ಷ ನಿಷೇಧ ಹೇರಲು ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಮತ್ತೊಂದು ಹಿನ್ನಡೆ ಉಂಟಾಗಿದೆ.
ರಾಜ್ಯ ಸರ್ಕಾರವು ಸಾರ್ವಜನಿಕ ಸ್ಥಳಗಳು ಹಾಗೂ ಸರ್ಕಾರಿ ಆಸ್ತಿಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ನಿರ್ಬಂಧಿಸುವ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪುನಶ್ಚೇತನ ಸೇವಾ ಸಂಸ್ಥೆ ಧಾರವಾಡ ಹೈಕೋರ್ಟ್ ವಿಭಾಗಿಯ ಪೀಠದ ಮೆಟ್ಟಿಲೇರಿತ್ತು.
ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಅಕ್ಟೋಬರ್ 28ರಂದು ಸರ್ಕಾರದ ಆದೇಶದ ಜಾರಿಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್ ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ದು, ಸರ್ಕಾರದ ಆಸ್ತಿಗಳಿಗೆ ಹಾನಿಯಾಗಬಾರದೆಂಬ ಉದ್ದೇಶದಿಂದಲೇ ನಿಯಂತ್ರಣ ವಿಧಿಸಲಾಗಿದೆ. ಖಾಸಗಿ ಸಂಸ್ಥೆಗಳು ಸರ್ಕಾರದ ಸ್ವತ್ತುಗಳಲ್ಲಿ ಅನುಮತಿಯಿಲ್ಲದೆ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಸಾರ್ವಜನಿಕ ಸ್ಥಳಗಳ ಬಳಕೆಗೆ ಅನುಮತಿ ಅಗತ್ಯ ಎಂದು ವಾದಿಸಿದರು.
ಇದಕ್ಕೆ ಪ್ರತಿಯಾಗಿ ಪ್ರತಿವಾದಿ ಪರ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿ ಮೈದಾನಗಳು, ಉದ್ಯಾನಗಳು ಎಲ್ಲವೂ ಸರ್ಕಾರದ ಸ್ವತ್ತು ಎಂದು ಭಾವಿಸುವಂತಿಲ್ಲ. ಪೊಲೀಸ್ ಕಾಯ್ದೆಯ ಪ್ರಕಾರ ಕ್ರಮ ಕೈಗೊಳ್ಳುವ ಅಧಿಕಾರ ಜಿಲ್ಲಾ ದಂಡಾಧಿಕಾರಿಗೆ ಮಾತ್ರವಿದೆ. ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಲು ಏಕಸದಸ್ಯ ಪೀಠವನ್ನೇ ಸಂಪರ್ಕಿಸಬಹುದಾಗಿತ್ತು ಎಂದು ವಾದಿಸಿದರು.
ನವೆಂಬರ್ 4ರಂದು ಪರ-ವಿರೋಧ ವಾದಗಳನ್ನು ಆಲಿಸಿದ್ದ ಧಾರವಾಡದ ವಿಭಾಗೀಯ ಪೀಠವು ಇಂದು ತೀರ್ಪು ನೀಡಿದ್ದು, ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿ, ಏಕಸದಸ್ಯ ಪೀಠದಲ್ಲೇ ವಿಚಾರಣೆ ಮುಂದುವರಿಯಬೇಕೆಂದು ತಿಳಿಸಿದೆ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
