ದೋಹಾ, 17 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪ್ಯಾರಿಸ್ ಸೇಂಟ್-ಜರ್ಮೈನ್ (ಪಿಎಸ್‌ಜಿ) ಹಾಗೂ ಫ್ರಾನ್ಸ್ ತಂಡದ ಫಾರ್ವರ್ಡ್ ಔಸ್ಮಾನೆ ಡೆಂಬೆಲೆ ಅವರಿಗೆ ಫಿಫಾ ವರ್ಷದ ಪುರುಷರ ಶ್ರೇಷ್ಠ ಆಟಗಾರ ಪ್ರಶಸ್ತಿ ಲಭಿಸಿದೆ. ಇದೇ ವೇಳೆ, ಸ್ಪೇನ್ ಮತ್ತು ಬಾರ್ಸಿಲೋನಾ ಮಿಡ್‌ಫೀಲ್ಡರ್ ಐತಾನಾ ಬೊನ್ಮತಿ ಅವರು ಸತತ ಮೂರನೇ ಬಾರಿ ಫಿಫಾ ವರ್ಷದ ಮಹಿಳಾ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
28 ವರ್ಷದ ಡೆಂಬೆಲೆ, ಪಿಎಸ್‌ಜಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಯುಎಫ್ಎ ಚಾಂಪಿಯನ್ಸ್ ಲೀಗ್ ಕಿರೀಟ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಫೈನಲ್ ಪಂದ್ಯದಲ್ಲಿ ಇಂಟರ್ ಮಿಲಾನ್ ವಿರುದ್ಧ 5–0 ಅಂತರದ ಭರ್ಜರಿ ಜಯದಲ್ಲಿ ಅವರು ಗಮನಾರ್ಹ ಪ್ರದರ್ಶನ ನೀಡಿದರು.
ಕಳೆದ ಋತುವಿನಲ್ಲಿ ಡೆಂಬೆಲೆ ಎಲ್ಲಾ ಸ್ಪರ್ಧೆಗಳನ್ನೂ ಸೇರಿಸಿ ಒಟ್ಟು 35 ಗೋಲುಗಳನ್ನು ದಾಖಲಿಸಿದ್ದು, ಇದರಲ್ಲಿ ಲೀಗ್–1 ನಲ್ಲಿ 21 ಗೋಲುಗಳು ಸೇರಿವೆ. ಈ ಮೂಲಕ ಅವರು ಪಂದ್ಯಾವಳಿಯ ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದರು.
ಇನ್ನೊಂದೆಡೆ, ಐತಾನಾ ಬೊನ್ಮತಿ ಅವರು ಮಹಿಳಾ ಚಾಂಪಿಯನ್ಸ್ ಲೀಗ್‌ನಲ್ಲಿ ಪ್ಲೇಯರ್ ಆಫ್ ದಿ ಸೀಸನ್ ಗೌರವವನ್ನೂ ಪಡೆದುಕೊಂಡರು. ಜೊತೆಗೆ, ಅವರು ಸತತ ಮೂರನೇ ಬಾರಿ ಮಹಿಳಾ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ಗೆದ್ದು ತಮ್ಮ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ಬೊನ್ಮತಿ ಅವರ ನೇತೃತ್ವದಲ್ಲಿ ಬಾರ್ಸಿಲೋನಾ ತಂಡ ದೇಶೀಯ ತ್ರಿವಳಿ ಕಿರೀಟ ಸಾಧಿಸಿದ್ದು, ಚಾಂಪಿಯನ್ಸ್ ಲೀಗ್ ಫೈನಲ್ ತಲುಪಿದೆ. ಅಷ್ಟೇ ಅಲ್ಲದೆ, ಸ್ಪೇನ್ ತಂಡದೊಂದಿಗೆ ಯುರೋ–2025 ಫೈನಲ್ ಪ್ರವೇಶಿಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
