ಹಿಸೋರ್, 09 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : 2025ರ ಸಿಎಎಫ್ಎ ನೇಷನ್ಸ್ ಕಪ್ ಸ್ಪರ್ಧೆಯಲ್ಲಿ ಭಾರತವು ಇತಿಹಾಸ ನಿರ್ಮಿಸಿದೆ. ಮೂರನೇ ಸ್ಥಾನಕ್ಕಾಗಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಭಾರತವು ಓಮನ್‌ನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 3–2ರಿಂದ ಸೋಲಿಸಿ ಕಂಚಿನ ಪದಕ ಜಯಿಸಿದೆ.
ನಿಗದಿತ 90 ನಿಮಿಷಗಳ ಆಟ 1–1ರಿಂದ ಮುಕ್ತಾಯವಾಗಿತ್ತು. ಭಾರತ ಪರ ಉದಾಂತ ಸಿಂಗ್ ಸಮಬಲ ಗೋಲು ಬಾರಿಸಿದರು. ನಂತರ ನಡೆದ ಶೂಟೌಟ್‌ನಲ್ಲಿ ಭಾರತದ ಪರ ಲಾಲಿಯಾಂಜುವಾಲಾ ಚಾಂಗ್ಟೆ, ರಾಹುಲ್ ಭೇಕೆ ಮತ್ತು ಜಿತಿನ್ ಎಂಎಸ್ ಗುರಿ ಕಂಡರು. ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ನಿರ್ಣಾಯಕ ಕ್ಷಣದಲ್ಲಿ ಓಮನ್‌ನ ಕೊನೆಯ ಪೆನಾಲ್ಟಿ ಶಾಟ್‌ನ್ನು ತಡೆಯುವ ಮೂಲಕ ಭಾರತಕ್ಕೆ ಜಯ ತಂದುಕೊಟ್ಟರು.
ಭಾರತಕ್ಕೆ ಇದು ಐತಿಹಾಸಿಕ ಸಾಧನೆ ಎಂದೇ ಪರಿಗಣಿಸಲಾಗಿದೆ, ಏಕೆಂದರೆ ಪಶ್ಚಿಮ ಏಷ್ಯಾದ ಉನ್ನತ ಶ್ರೇಯಾಂಕಿತ ತಂಡವಾದ ಓಮನ್ ವಿರುದ್ಧ ಭಾರತ ಮೊಟ್ಟಮೊದಲ ಬಾರಿಗೆ ಜಯ ಸಾಧಿಸಿದೆ. 2000ರಿಂದ ಇವರೆಗೂ ಭಾರತ–ಓಮನ್ ಒಂಬತ್ತು ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಆರು ಪಂದ್ಯಗಳಲ್ಲಿ ಭಾರತ ಸೋಲು ಕಂಡಿತ್ತು.
ಎರಡೂ ತಂಡಗಳು ತಮ್ಮ ಗುಂಪು ಹಂತವನ್ನು ಎರಡನೇ ಸ್ಥಾನದಲ್ಲಿ ಮುಗಿಸಿ, ಮೂರನೇ ಸ್ಥಾನಕ್ಕಾಗಿ ಹಿಸೋರ್ ಸೆಂಟ್ರಲ್ ಕ್ರೀಡಾಂಗಣದಲ್ಲಿ ಈ ಪೈಪೋಟಿ ನಡೆಸಲಾಯಿತು. 2021ರಲ್ಲಿ ಕೊನೆಯ ಬಾರಿಗೆ ಮುಖಾಮುಖಿಯಾದಾಗ ಪಂದ್ಯ 1–1 ಡ್ರಾ ಆಗಿತ್ತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
