ಬೆಂಗಳೂರು, 17ಜನವರಿ(ಹಿ.ಸ):
ಆ್ಯಂಕರ್ :
ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಸರಣಿಯ ಕೊನೆಯ ಟಿ20 ಪಂದ್ಯ ಇಂದು ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಇರಾದೆಯಲ್ಲಿದೆ ಟೀಮ್ ಇಂಡಿಯಾ. ಅತ್ತ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿರುವ ಅಫ್ಘಾನಿಸ್ತಾನ್ ತಂಡವು ಕೊನೆಯ ಮ್ಯಾಚ್ನಲ್ಲಿ ಗೆಲ್ಲುವ ಮೂಲಕ ವೈಟ್ ವಾಶ್ ತಪ್ಪಿಸಿಕೊಳ್ಳಲು ಪ್ಲ್ಯಾನ್ ರೂಪಿಸಿದೆ. ಹೀಗಾಗಿ ಬೆಂಗಳೂರು ಮೈದಾನದಲ್ಲಿ ಇಂದು ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.
ಸರಣಿ ಗೆದ್ದಿರುವ ಟೀಮ್ ಇಂಡಿಯಾ:
ಅಫ್ಘಾನ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಈಗಾಗಲೇ ಭಾರತ ತಂಡ 2-0 ಅಂತರದಿಂದ ವಶಪಡಿಸಿಕೊಂಡಿದೆ. ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು 6 ವಿಕೆಟ್ಗಳಿಂದ ಗೆದ್ದುಕೊಂಡಿದ್ದ ಟೀಮ್ ಇಂಡಿಯಾ, ಇಂದೋರ್ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ 6 ವಿಕೆಟ್ಗಳ ಜಯ ಸಾಧಿಸಿತು. ಇದೀಗ ಮೂರನೇ ಪಂದ್ಯವನ್ನು ರೋಹಿತ್ ಶರ್ಮಾ ಪಡೆ ಗೆಲ್ಲುವ ವಿಶ್ವಾಸದಲ್ಲಿದೆ.
ಎಷ್ಟು ಗಂಟೆಗೆ ಪಂದ್ಯ ಶುರು?
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಶುರುವಾಗಲಿದೆ. ಅದಕ್ಕೂ ಮುನ್ನ 6.30 ಕ್ಕೆ ಟಾಸ್ ಪ್ರಕ್ರಿಯೆ ಜರುಗಲಿದೆ.
ಹಿಂದೂಸ್ತಾನ್ ಸಮಾಚಾರ್
