
ಬೆಂಗಳೂರು,8 ನವೆಂಬರ್ (ಹಿ.ಸ):
ಆ್ಯಂಕರ್ :ಸಾಲುಸಾಲು ರಜೆ ಹಿನ್ನೆಲೆಯಲ್ಲಿ ಮಿತಿಮೀರಿ ಟಿಕೆಟ್ ದರ ವಸೂಲಿ ಮಾಡದಂತೆ ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆ ನೀಡಿದ ಸೂಚನೆ ನೀಡಿದ್ದರೂ, ಅದನ್ನು ಲೆಕ್ಕಿಸದ ಬಸ್ ಮಾಲೀಕರು ಮುಂದಿನ ಶುಕ್ರವಾರ ರಾತ್ರಿಯಿಂದಲೇ ಸಂಚರಿಸುವ ಬಸ್ಗಳಲ್ಲಿ ಪ್ರಯಾಣಿಕರಿಂದ ಮಾಮೂಲಿ ದರಕ್ಕಿಂತ ಎರಡೂವರೆ ಪಟ್ಟು ಹೆಚ್ಚಿನ ಪ್ರಯಾಣ ದರ ವಸೂಲಿಗೆ ಸಿದ್ಧರಾಗಿದ್ದಾರೆ.
ಪ್ರತಿ ಬಾರಿ ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಿಂದ ಬೇರೆ ಊರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಕಾರಣ ಖಾಸಗಿ ಬಸ್ಗಳಲ್ಲಿ ಪ್ರಯಾಣ ದರವನ್ನು ದುಪ್ಪಟ್ಟು ಮಾಡಲಾಗುತ್ತದೆ. ಈ ಕುರಿತು ಸಾರಿಗೆ ಇಲಾಖೆಗೂ ದೂರು ನೀಡಲಾಗುತ್ತಿತ್ತು. ಹೀಗಾಗಿ ಹಬ್ಬದ ಸಂದರ್ಭದಲ್ಲಿ ಮಿತಿಮೀರಿ ಟಿಕೆಟ್ ದರ ವಸೂಲಿ ಮಾಡದಂತೆ ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆ ಪದೇಪದೆ ಸೂಚನೆ ನೀಡುತ್ತಲಿದೆ. ಕಳೆದ ಗೌರಿ-ಗಣೇಶ, ದಸರಾ ಹಬ್ಬಗಳ ಸಂದರ್ಭದಲ್ಲಿಯೂ ಆ ರೀತಿಯ ಎಚ್ಚರಿಕೆ ನೀಡಿ ಕೆಲ ಬಸ್ಗಳ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಲಾಗಿತ್ತು. ಆದರೂ, ಖಾಸಗಿ ಬಸ್ ಮಾಲೀಕರು ಮಾತ್ರ ಪ್ರಯಾಣ ದರ ಬೇಕಾಬಿಟ್ಟಿಯಾಗಿ ಏರಿಕೆ ಮಾಡುವುದರಿಂದ ಹಿಂದೆ ಸರಿದಿಲ್ಲ.
ಎರಡನೇ ಶನಿವಾರ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಾಲುಸಾಲು ರಜೆಯಿದ್ದು, ಬೆಂಗಳೂರಿನಿಂದ ವಿವಿಧ ಜಿಲ್ಲೆ, ನಗರಗಳಿಗೆ ತೆರಳುವವರು ಶುಕ್ರವಾರದಿಂದಲೇ ಪ್ರಯಾಣ ಬೆಳೆಸುತ್ತಾರೆ. ವರ್ಷದ ಕೊನೆಯ ಹಬ್ಬವಾದ ಕಾರಣ ಸಾಕಷ್ಟು ಜನರು ಊರಿಗೆ ತೆರಳುವ ಸಾಧ್ಯತೆಗಳಿವೆ. ಅದರಿಂದ ಪ್ರಯಾಣಿಕರು ಭಾರೀ ಸಂಖ್ಯೆಯಲ್ಲಿ ಹೆಚ್ಚಲಿದ್ದು, ಅದರಿಂದ ಲಾಭ ಪಡೆಯಲು ಮುಂದಾಗಿರುವ ಖಾಸಗಿ ಬಸ್ ಮಾಲೀಕರು ಪ್ರಯಾಣ ದರವನ್ನು ಎರಡೂವರೆ ಪಟ್ಟು ಹೆಚ್ಚಳ ಮಾಡಿದ್ದಾರೆ. ಹೀಗಾಗಿ ಆನ್ಲೈನ್ ಮೂಲಕ ಈಗಲೇ ಟಿಕೆಟ್ ಕಾಯ್ದಿರಿಸಲು ಮುಂದಾದವರು ಪ್ರಯಾಣ ದರ ನೋಡಿ ಗಾಬರಿಯಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
