ಬೆಂಗಳೂರು ನಗರದಲ್ಲಿ ನೀರಿನ ಬಿಕ್ಕಟ್ಟು ತೀವ್ರಗೊಂಡಿರುವುದರಿಂದ ಕೆಲವು ಶಾಲೆಗಳು ಮತ್ತು ಕೋಚಿಂಗ್ ಸೆಂಟರ್ಗಳು ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿವೆ. ಇನ್ನು ಕೆಲವು ಶಾಲೆಗಳು ಆನ್ಲೈನ್ ತರಗತಿಯ ಮೊರೆ ಹೋಗಿವೆ. ಬೆಂಗಳೂರು ನೀರಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ ಮತ್ತು ಬೇಸಿಗೆ ಈಗಷ್ಟೇ ಆರಂಭವಾಗಿದ್ದು, ಮುಂದಿನ ದಿನಗಳ ಬಗ್ಗೆ ನಗರದ ನಿವಾಸಿಗಳು ತೀವ್ರ ಚಿಂತಿತರಾಗಿದ್ದಾರೆ.
ಬೆಂಗಳೂರಿನ ಕೆಲವು ಶಾಲೆಗಳು ಮತ್ತು ಕೋಚಿಂಗ್ ಸೆಂಟರ್ ಗಳನ್ನು ಮುಚ್ಚಲಾಗಿದೆ. ಬೆಂಗಳೂರು ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಶಾಲೆಯನ್ನು ಮುಚ್ಚಲಾಗಿದೆ ಮತ್ತು ತರಗತಿಗಳನ್ನು ಆನ್ ಲೈನ್ ಮೋಡ್ ನಲ್ಲಿ ನಡೆಸಲಾಗುವುದು ಎಂದು ಶಾಲೆ ಘೋಷಿಸಿದೆ. ಅದೇ ರೀತಿ, ನಗರದ ವಿಜಯನಗರ ಪ್ರದೇಶದಲ್ಲಿರುವ ಕೋಚಿಂಗ್ ಸೆಂಟರ್ ಕೂಡ ‘ತುರ್ತು ಪರಿಸ್ಥಿತಿ’ಯ ಕಾರಣ ನೀಡಿ ಒಂದು ವಾರದವರೆಗೆ ಆನ್ ಲೈನ್ ಮೂಲಕ ತರಗತಿಗಳಿಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದೆ.
ಬೆಂಗಳೂರಿನ ಬಾಬುಸಾಪಾಳ್ಯದಲ್ಲಿ ಮಾತನಾಡಿದ ಸ್ಥಳೀಯರೊಬ್ಬರು, ಕಳೆದ 6 ತಿಂಗಳಿಂದ ನಮ್ಮ ಪ್ರದೇಶದಲ್ಲಿ ನೀರಿನ ಕೊರತೆ ಇದೆ. ಶ್ರೀಮಂತರು ಟ್ಯಾಂಕರ್ನಲ್ಲಿ ನೀರು ಖರೀದಿಸಿದರೂ ನಮ್ಮಂತಹ ಬಡವರು ನೀರಿಗಾಗಿ ಪರದಾಡಬೇಕಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಕಾವೇರಿ ನೀರಿನ ಪೈಪ್ಲೈನ್ ಹಾಕಲಾಗಿದ್ದರೂ ಇನ್ನೂ ನೀರಿನ ಸಂಪರ್ಕ ಕಲ್ಪಿಸಿಲ್ಲ. ಇಲ್ಲಿಗೆ ಕಾವೇರಿ ನೀರು ಬಂದರೆ ಇಲ್ಲಿನ ಜನರ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎನ್ನುತ್ತಿದ್ದಾರೆ ಸ್ಥಳೀಯರು.
