ಬೆಂಗಳೂರು ಸೋಮವಾರ ಸಂಜೆಯಿಂದ ರಾತ್ರಿ ಪೂರ್ತಿ ಗುಡುಗು-ಮಿಂಚು ಸಹಿತ ಅಬ್ಬರಿಸಿದ ಧಾರಾಕಾರ ಮಳೆಯು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಪ್ರಮುಖ ರಸ್ತೆಗಳು ಹೊಳೆ ರೂಪ ತಾಳಿದ್ದರಿಂದ ಸಂಚಾರ ಸ್ತಂಭನ ಉಂಟಾಗಿ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತವು.
BulletsIn
- ಸೋಮವಾರ ಸಂಜೆ ಶುರುವಾದ ಮಳೆ ರಾತ್ರಿ 12 ಗಂಟೆವರೆಗೆ ಅಬ್ಬರಿಸಿತು.
- ಆ ಬಳಿಕ ರಾತ್ರಿ ಪೂರ್ತಿ ಜಿಟಿ ಜಿಟಿ ಮಳೆ ಮುಂದುವರಿಯಿತು.
- ಕೆಲವು ಕಡೆ ಭಾರಿ ಮಳೆ ಆಗಿದ್ದು, ಕೆಲವೆಡೆ ಮಳೆ ಮಧ್ಯಂತರವಾಗಿ ಜೋರು ಅಬ್ಬರಿಸುತ್ತಿತ್ತು.
- ವರುಣನ ಆರ್ಭಟದಿಂದಾಗಿ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯಿತು.
- ಮುಖ್ಯ ರಸ್ತೆಗಳು ಹಾಗೂ ಅಂಡರ್‌ಪಾಸ್‌ಗಳಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು.
- ಸಂಜೆಯ ವೇಳೆ ಕಚೇರಿಗಳಿಂದ ಮನೆಗೆ ಹೊರಟ ಉದ್ಯೋಗಿಗಳು ತಾಸುಗಟ್ಟಲೇ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡು ಪರದಾಡಿದರು.
- ಕೆಲವು ಸ್ಥಳಗಳಲ್ಲಿ ಮರಗಳು ಧರೆಗುರುಳಿ ಬಿದ್ದವು.
- ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಯಿತು.
- ಸಂಚಾರ ಪೊಲೀಸರು ಮಳೆ ನೀರನ್ನು ತಗ್ಗಿಸಲು ಹರಸಾಹಸಪಟ್ಟರು.
- ಸುರಿಯುತ್ತಿದ್ದ ಮಳೆಯಲ್ಲಿಯೇ ಕಸ-ಕಡ್ಡಿಯನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
- ಪೂರ್ವ ಅರಬ್ಬೀ ಸಮುದ್ರದಲ್ಲಿ ಸುಳಿಗಾಳಿ ಹಿನ್ನೆಲೆ ಮುಂದಿನ ನಾಲ್ಕು ದಿನ ಬೆಂಗಳೂರಿನಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ.
