ಬೆಂಗಳೂರು, 7 ಏಪ್ರಿಲ್ : ಆ್ಯಂಕರ್:ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಉಭಯ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಅದರಂತೆ ಇಂದು(ಏ.07) ಬೆಂಗಳೂರು ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲಿದ್ದಾರೆ. ಇನ್ನು ನಿನ್ನೆಯಷ್ಟೇ ಕೋಲಾರದ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ಮಾಡಿದ್ದರು. ಅದರ ಬೆನ್ನಲ್ಲೇ ಇಂದು ಇಡೀ ದಿನ ಬೆಂಗಳೂರಿನಲ್ಲಿ ಸಿಎಂ ಅಬ್ಬರದ ಪ್ರಚಾರದ ಮೂಲಕ ಮತಬೇಟೆಯಾಡಲಿದ್ದಾರೆ.
ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರು ಚುನಾವಣಾ ಪೂರಕವಾಗಿ ಕಾರ್ಯಕರ್ತರ ಸಭೆ ಮತ್ತು ಪ್ರಚಾರ ನಡೆಸಲಿದ್ದಾರೆ. ಇಂದು ಬೆಳಗ್ಗೆ 11 ರಿಂದ ಸಂಜೆ 6 ಗಂಟೆಯವರೆಗೆ ಪ್ರಚಾರದಲ್ಲಿ ತೊಡಗಿಕೊಳ್ಳಲಿರುವ ಸಿಎಂ, ಬೆಂಗಳೂರು ಉತ್ತರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಮಲ್ಲೇಶ್ವರಂನಿಂದ ರೋಡ್ ಶೋ ಆರಂಭಿಸಲಿರುವ ಅವರು, ದಾಸರಹಳ್ಳಿ, ಬ್ಯಾಟರಾಯನಪುರ, ಮಲ್ಲೇಶ್ವರಂ, ಪದ್ಮನಾಭನಗರ, ಬೊಮ್ಮನಹಳ್ಳಿ, ಮಹಾಲಕ್ಷ್ಮಿ ಲೇಔಟ್ ಕ್ಷೇತಗಳಲ್ಲಿ ಪ್ರಚಾರ ಮಾಡಲಿದ್ದಾರೆ.
