ರಾಯಚೂರು,, 18 ಅಕ್ಟೋಬರ್ :
ಆ್ಯಂಕರ್: 2023-24ನೇ ಸಾಲಿನಲ್ಲಿ ರಾಯಚೂರು ಜಿಲ್ಲೆಯ ಅಲ್ಪಸಂಖ್ಯಾತರ ಕಾನೂನು ಪದವಿ ಪಡೆದ ಅಭ್ಯರ್ಥಿಗಳಿಗೆ ತರಬೇತಿ ಭತ್ಯೆಯನ್ನು ಮಂಜೂರು ಮಾಡಲು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರಾಯಚೂರುನಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ತರಬೇತಿ ಭತ್ಯೆಯನ್ನು ಪಡೆಯಲು ಆಸಕ್ತವುಳ್ಳ ಅಭ್ಯರ್ಥಿಗಳು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ಮತ್ತು ಅಲ್ಪಸಂಖ್ಯಾತರ ಅರಿವು ಮೂಡಿಸುವ ಮಾಹಿತಿ ಕೇಂದ್ರ ಹಾಷ್ಮೀಯ ಶಾಲೆ ಕಂಪೌಂಡ ಹಿಂದುಗಡೆ ಬಾಲಭವನ ಹತ್ತಿರ, ರಾಯಚೂರು ಇವರಿಂದ ಅರ್ಜಿಗಳನ್ನು ಉಚಿತವಾಗಿ ಪಡೆದು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಅ.19 ರಿಂದ ನ.03 ರೊಳಗೆ ಸಲ್ಲಿಸತಕ್ಕದ್ದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಜಿಗಳು ಸಲ್ಲಿಸಲು ಇರಬೇಕಾದ ಅರ್ಹತೆಗಳು: ರಾಯಚೂರು ಜಿಲ್ಲೆಯ ನಿವಾಸಿಯಾಗಿರಬೇಕು, ಕಾನೂನು ತರಬೇತಿ ಭತ್ಯೆ ಪಡೆಯುವ ಅಭ್ಯರ್ಥಿಯು ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಮತ್ತು ಪಾರ್ಸಿ) ಸಮುದಾಯಕ್ಕೆ ಸೇರಿದವರಾಗಿರಬೇಕು, ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ. 3.50 ಲಕ್ಷಕ್ಕೆ ಮೀರಿರಬಾರದು, ಅಭ್ಯರ್ಥಿಯು ಬಾರ್ ಕೌನ್ಸಿಲಿಂಗ್ ನಲ್ಲಿ ಹೆಸರನ್ನು ನೊಂದಾಯಿಸಿರಬೇಕು, ಅರ್ಜಿ ಸಲ್ಲಿಸಲು ನಿಗಧಿ ಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯ ವಯಸ್ಸು 30 ವರ್ಷದೊಳಗಿರಬೇಕು, ಅರ್ಜಿ ಸಲ್ಲಿಸಲು ನಿಗಧಿ ಪಡಿಸಿರುವ ಕಡೆಯ ದಿನಾಂಕಕ್ಕೆ ಅಭ್ಯರ್ಥಿಯು 2 ವರ್ಷಗಳ ಅವಧಿಯೊಳಗೆ ಕಾನೂನು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು, ಅಭ್ಯರ್ಥಿಗಳು ಸಲ್ಲಿಸುವ ಮಾಹೆಯಾನ ದಿನಚರಿಯನ್ನು ಪರಿಶೀಲಿಸಿ ತರಬೇತಿ ಭತ್ಯೆಯನ್ನು ಮಂಜೂರು ಮಾಡಲಾಗುವುದು, ಅಭ್ಯರ್ಥಿಯು ತರಬೇತಿಯನ್ನು ಮಧ್ಯದಲ್ಲಿ ಬಿಡುವಂತಿಲ್ಲ. ಈ ಬಗ್ಗೆ ಒಂದು ಮುಚ್ಚಳಿಕೆ ಪತ್ರ ನೀಡಬೇಕು, ಜಿಲ್ಲೆಯಲ್ಲಿ ಮೂರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಇದರಲ್ಲಿ ಎರಡು ಅಭ್ಯರ್ಥಿ ಮುಸ್ಲಿಂ ಹಾಗೂ ಇನ್ನೊಬ್ಬ ಅಭ್ಯರ್ಥಿಯನ್ನು ಇತರೆ ಅಲ್ಪಸಂಖ್ಯಾತರ ಸಮುದಾಯದಿಂದ ಆಯ್ಕೆ ಮಾಡಲಾಗುವುದು.
ದಾಖಲಾತಿಗಳ ವಿವರ: ನಿಗಧಿತ ನಮೂನೆಯಲ್ಲಿ ಅರ್ಜಿ, ತಹಶೀಲ್ದಾರರಿಂದ ಪಡೆದ ಆದಾಯ ಮತ್ತು ಜಾತಿ ಪ್ರಮಾಣ ಪತ್ರ (ಧೃಡೀಕೃತ ಪ್ರತಿ), ತಹಶೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ, ಸ್ವಯಂ ದೃಡೀಕೃತ 2 ಭಾವಚಿತ್ರ, ಕಾನೂನು ಪದವಿಯ ಅಂಕ ಪಟ್ಟಿ (ದೃಡೀಕೃತ ಪ್ರತಿ), ಬಾರ್ ಕೌನ್ಸಿಲಿಂಗ್ನಲ್ಲಿ ಹೆಸರನ್ನು ನೊಂದಾಯಿಸಿದ ಪ್ರತಿಯನ್ನು ಹೊಂದಿರಬೇಕು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
