ಬೆಂಗಳೂರು, 24 ಫೆಬ್ರವರಿ
ಆ್ಯಂಕರ್ :
ಕೇಂದ್ರ ಸರ್ಕಾರದ ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ ರಾಜ್ಯದ 15 ರೈಲ್ವೆ ನಿಲ್ದಾಣ ಅಭಿವೃದ್ಧಿ ಹಾಗೂ ನಾಲ್ಕು ರೈಲ್ವೆ ಕೆಳ ಮತ್ತು ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಫೆ. 26ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ರೈಲ್ವೆ ಸಚಿವಾಲಯದ ರೈಲ್ವೆ ಅಭಿವೃದ್ಧಿ ಮಂಡಳಿಯು ದೇಶದ 554 ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಹಾಗೂ 1,585 ರೈಲ್ವೆ ಕೆಳ ಮತ್ತು ಮೇಲ್ಸೇತುವೆಗಳ ನಿರ್ಮಾಣ ಕಾಮಗಾರಿಗೆ ಯೋಜನೆ ರೂಪಿಸಿದೆ. ಈ ಪೈಕಿ ರಾಜ್ಯದ 15 ರೈಲ್ವೆ ನಿಲ್ದಾಣ ಅಭಿವೃದ್ಧಿ ಹಾಗೂ ನಾಲ್ಕು ರೈಲ್ವೆ ಕೆಳ ಮತ್ತು ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ರಾಜ್ಯದ ಕಾಮಗಾರಿಗಳನ್ನು ಒಟ್ಟು 372.13 ಕೋಟಿ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
