ಬೆಂಗಳೂರು,
ಬೆಂಗಳೂರಿನ ಮೂಲಕ ಮೈಸೂರು ಮತ್ತು ಚೆನ್ನೈಗೆ ಸಂಪರ್ಕ ಕಲ್ಪಿಸುವ ಎರಡನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭಿಸಿದೆ. ಮೈಸೂರಿನಲ್ಲಿ ಪ್ರೀಮಿಯಂ ರೈಲನ್ನು ನಿರ್ವಹಿಸಲು ಅಗತ್ಯ ಸೌಲಭ್ಯಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿತ್ತು. ಈ ರೈಲಿಗೆ ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಆನ್ ಲೈನ್ ಮೂಲಕ ಚಾಲನೆ ನೀಡಿದ್ದರು. ನಂತರ ರೈಲು ಭಾಗಶಃ ಸಂಚಾರ ಆರಂಭಿಸಿತ್ತು.
ವಂದೇ ಭಾರತ್ ರೈಲುಗಳನ್ನು ನಿರ್ವಹಿಸಲು ಮೈಸೂರಿನಲ್ಲಿ ಸೌಲಭ್ಯದ ಕೊರತೆಯಿಂದಾಗಿ ಮಾರ್ಚ್ 14 ರಿಂದ ಏಪ್ರಿಲ್ 4 ರ ನಡುವಣ ಅವಧಿಯಲ್ಲಿ ರೈಲು ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ ಎಂ ವಿ ಟಿ) ಬೆಂಗಳೂರು ಬೈಯಪ್ಪನಹಳ್ಳಿ ಮತ್ತು ಚೆನ್ನೈ ಸೆಂಟ್ರಲ್ ನಡುವೆ ಸಂಚರಿಸುತ್ತಿತ್ತು. ಈ ರೈಲು ಬುಧವಾರ ಹೊರತುಪಡಿಸಿ ಪ್ರತಿ ದಿನ ಸಂಚರಿಸುತ್ತದೆ.
ಏಪ್ರಿಲ್ 5 ಮತ್ತು ಜುಲೈ 29 ರ ನಡುವೆ, ಬುಧವಾರದಂದು ಈ ರೈಲು ಸಂಚರಿಸುವುದಿಲ್ಲ. ಜುಲೈ 30 ರಿಂದ, ಇದು ಗುರುವಾರದಂದು ಕಾರ್ಯನಿರ್ವಹಿಸುವುದಿಲ್ಲ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
