

ಹೊಸಪೇಟೆ, 3 ನವೆಂಬರ್ (ಹಿ.ಸ):
ಆ್ಯಂಕರ್ : ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗೃತೆ ವಹಿಸಬೇಕು ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್ ಜಮೀರ್ ಅಹ್ಮದ್ ಖಾನ್ ಅವರು ಸೂಚನೆ ನೀಡಿದ್ದಾರೆ.
ವಿಜಯನಗರ ಜಿಲ್ಲೆಯ ಪ್ರಗತಿ ಪರಿಶೀಲನೆ ಹಾಗೂ ಬರಗಾಲ ನಿರ್ವಹಣೆ ಕುರಿತು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕಡಿಯುವ ನೀರಿನ ಸಮಸ್ಯೆ ಇರುವ ಸ್ಥಳಗಳನ್ನು ಗುರುತಿಸಿ, ನಗರ ಪ್ರದೇಶಗಳ ವಾರ್ಡ್ಗಳಲ್ಲಿ ಕನಿಷ್ಠ 2 ಬೋರ್ವೆಲ್ಗಳು ಇರಬೇಕು. ಗ್ರಾಮೀಣ ಪ್ರದೇಶಗಳಲ್ಲಿಯೂ ಜನರ ಸಂಖ್ಯೆಗನುಗಣವಾಗಿ ಬೋರ್ವೆಲ್ ಕೊರೆಯಿಸಿ. ಒಟ್ಟಾರೆ ಕುಡಿಯುವ ನೀರಿಗಾಗಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ತೀವ್ರ ಬರ ಆವರಿಸಿದ್ದು, ಜಾನುವಾರುಗಳಿಗೆ ಮೇವು ಕೊರತೆಯಾಗದಿರಲಿ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ಗೋಶಾಲೆಗಳು, ಸಮರ್ಪಕವಾಗಿ ಮೇವು ಪೂರೈಕೆಗೆ ಪಶು ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ವಿಜಯನಗರ ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಮಾತನಾಡಿ, ಹೊಸಪೇಟೆ ತಾಲ್ಲೂಕಿನ ಹಂಪಿ ಸೇರಿದಂತೆ ವಿವಿಧ ಗ್ರಾಮಗಳು ಕೆನಲ್ ಮೂಲಕವೇ ನೀರನ್ನು ಅವಲಂಭಿಸಿವೆ. ಪ್ರಸ್ತುತ ತೀವ್ರ ಬರ ಆವರಿಸಿದ್ದರಿಂದ ನೀರಿಗಾಗಿ ಸಮಸ್ಯೆಯಾಗಲಿದ್ದು, ಅಂತಹ ಗ್ರಾಮಗಳಲ್ಲಿ ಬೋರ್ವೆಲ್ ಕೊರೆಯಿಸಿ, ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದರು.
ಕೂಡ್ಲಗಿ ಶಾಸಕರಾದ ಡಾ. ಎನ್.ಟಿ.ಶ್ರೀನಿವಾಸ್ ಅವರು ಮಾತನಾಡಿ, ಕೂಡ್ಲಿಗಿ ತಾಲ್ಲೂಕಿನ ಕೆಲವೆಡೆ ಅಕ್ರಮ ಮದ್ಯ ಮಾರಾಟದಿಂದಾಗಿ ಅಪ್ರಾಪ್ತರು ಸಹ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದೆ. ಕೂಡಲೆ ಅಬಕಾರಿ ಇಲಾಖೆ ಅಧಿಕಾರಿಗಳು ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಬೇಕು ಎಂದರು.
ಹರಪನಹಳ್ಳಿ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಮಾತನಾಡಿ, ಹರಪನಹಳ್ಳಿ ತಾಲ್ಲೂಕಿನಲ್ಲಿ ಶಾಲೆಯ ಮತ್ತು ದೇವಸ್ಥಾನದ ಹತ್ತಿರ ಎಂ.ಎಸ್.ಎಲ್ ಮದ್ಯದ ಅಂಗಡಿ ಇದ್ದು, ಇದರಿಂದ ಶಾಲಾ ಮಕ್ಕಳು ಹಾಗೂ ದೇವಸ್ಥಾನಕ್ಕೆ ಹೋಗಿಬರು ಮಹಿಳೆಯರು, ಹೆಣ್ಣು ಮಕ್ಕಳಿಗೆ ಸಮಸ್ಯೆಯಾಗುತ್ತಿದ್ದು, ಕೂಡಲೇ ಈ ಮದ್ಯದ ಅಂಗಡಿ ಸ್ಥಳಾಂತರವಾಗಬೇಕು ಎಂದರು.
ಈ ವೇಳೆ ಸಚಿವರು ಮಾತನಾಡಿ, ಅಕ್ರಮ ಮದ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡುವವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಶಾಲೆ ಹಾಗೂ ದೇವಸ್ಥಾನಗಳ ಹತ್ತಿರವಿರುವ ಮದ್ಯದ ಅಂಗಡಿಗಳ ಸ್ಥಳಾಂತರಕ್ಕೂ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಯೋಜನೆಯನ್ನು ರೂಪಿಸಲಾಗಿದೆ. ಸಮಸ್ಯೆ ಉಂಟಾಗಬಹುದಾದ ಗ್ರಾಮಗಳನ್ನು ಗುರುತಿಸಲಾಗಿದೆ. ಹೊಸದಾಗಿ ಬೋರ್ವೆಲ್ ಕೊರೆಯಿಸಲು ಅಥವಾ ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆ ಪಡೆದು ನೀರು ಪೂರೈಕೆಗೆ ಗ್ರಾ.ಪಂ.ಗಳಲ್ಲಿ 15ನೇ ಹಣಕಾಸು ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಬರ ನಿರ್ವಹಣೆಗಾಗಿ ತಾಲ್ಲೂಕು ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಲಾಗಿದೆ. ಜಾನುವಾರುಗಳಿಗೆ ಯಾವುದೇ ರೀತಿಯ ಮೇವಿನ ಕೊರತೆಯಾಗದಂತೆ ಪಶು ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಹೊಸಪೇಟೆ ಉಪವಿಭಾಗಾಧಿಕಾರಿ ಮಹದ್ಅಲಿ ಅಕ್ರಮ μÁಹ ಸೇರಿದಂತೆ ವಿವಿಧ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಉಪಸ್ಥಿತರಿದ್ದರು
