

ರಾಯಚೂರು,, 8 ಜನವರಿ(ಹಿ.ಸ):
ಆ್ಯಂಕರ್: ಸ್ವಚ್ಛ ಮತ್ತು ಸುಂದರ ರಾಯಚೂರು ನಗರಕ್ಕಾಗಿ ನಗರಸಭೆಯಿಂದ ವಾರಕ್ಕೆ ಒಂದು ವಾರ್ಡನಂತೆ ಪ್ರತಿಯೊಂದು ವಾರ್ಡಗಳನ್ನು ಸಂಪೂರ್ಣ ಸ್ವಚ್ಛತೆ ಮಾಡಲು ನಿಮ್ಮೆಲ್ಲರ ಸಹಕಾರದೊಂದಿಗೆ ಜಿಲ್ಲಾಡಳಿತ ವಿಶೇಷ ಪ್ರಯತ್ನವನ್ನ ಮಾಡುತ್ತಿದೆ. ಈ ಪ್ರಯತ್ನಕ್ಕೆ ರಾಯಚೂರಿನ ಪ್ರತಿಯೊಂದು ಸಂಘ-ಸಂಸ್ಥೆಗಳು ಹಾಗೂ ಎಲ್ಲಾ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ನೀವೆಲ್ಲರು ಸ್ವಚ್ಚ ಮತ್ತು ಸುಂದರ ನಗರಕ್ಕಾಗಿ ನಮ್ಮೊಂದಿಗೆ ಕೈಜೋಡಿಸಬೇಕೆಂದು ಜಿಲ್ಲಾ ನಗರಾಭಿವೃದ್ದಿ ಕೋಶ ಜಗದೀಶ್ ಗಂಗಣ್ಣ ನವರ್ ಹಾಗೂ ನಗರಸಭೆಯ ಪೌರಾಯುಕ್ತರಾದ ಗುರು ಸಿದ್ದಯ್ಯ ಹಿರೇಮಠ ಅವರು ಮನವಿ ಮಾಡಿಕೊಂಡರು.
ರಾಯಚೂರಿನ ಪ್ರಜಾಪಿತ ಬ್ರಹ್ಮಕುಮಾರಿಯ ಈಶ್ವರ್ಯ ವಿಶ್ವ ವಿದ್ಯಾಲಯದಲ್ಲಿ ನಗರಸಭೆ ಹಾಗೂ ಜಿಲ್ಲಾ ನಗರ ಅಭಿವೃದ್ಧಿ ಕೋಶ ವತಿಯಿಂದ ಆಯೋಜಿಸಿದ್ದ ಸಂಘ-ಸಂಸ್ಥೆಯ ಮುಖಂಡರ ಹಾಗೂ ಸಾರ್ವಜನಿಕರ ಅಭಿಪ್ರಾಯ, ಸಲಹಾ ಸಭೆಯಲ್ಲಿ ಮಾತನಾಡಿದರು.
ರಾಯಚೂರು ನಗರದ ಸಂಪೂರ್ಣ ಸ್ವಚ್ಛತೆಗಾಗಿ ನಮ್ಮೊಂದಿಗೆ ನೀವೆಲ್ಲರೂ ಕೈಜೋಡಿಸಬೇಕಾಗಿದೆ.
ನಗರಸಭೆ ಹಾಗೂ ಜಿಲ್ಲಾಡಳಿತ ಈಗಾಗಲೇ ಹಲವಾರು ಪ್ರಯತ್ನಗಳ ಮೂಲಕ ರಾಯಚೂರಿನ ಸಂಪೂರ್ಣ ಸ್ವಚ್ಛತೆಗಾಗಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಮುಂದೆಯೂ ಪ್ರತಿ ವಾರ್ಡನಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ.
ರಾಯಚೂರು ನಗರವನ್ನು ನಮ್ಮ ಮನೆಯಂತೆ ಕಂಡು ಸ್ವಚ್ಚತೆಯಿಂದ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದು. ಸ್ವಚ್ಚತಾ ಕಾರ್ಯಕ್ರಮಕ್ಕೆ ಸ್ವಯಂಪ್ರೇರಿತವಾಗಿ ನಗರಸಭೆಯೊಂದಿಗೆ ಕೈಜೋಡಿಸಬೇಕು. ರಾಯಚೂರು ನಗರದ ಹಸಿರೀಕರಣದೊಂದಿದೆ ಎಲ್ಲಾ ವಾರ್ಡ್ ಗಳಲ್ಲಿಯೂ ಸ್ವಚ್ಚತೆ ಕಾಪಾಡಬೇಕು ಜಿಲ್ಲಾಡಳಿತದ ಉದ್ದೇಶವಾಗಿದೆ ಎಂದು ತಿಳಿಸಿದರು.
ಪ್ರತಿಯೊಂದು ವಾರ್ಡ ನ ಸ್ವಚ್ಚತೆಗಾಗಿ ಲಾಟರಿ ಮೂಲಕ ವಾರ್ಡ ಗಳನ್ನು ಆಯ್ಕೆ ಮಾಡಲಾಗುವುದು. ಲಾಟರಿಯಲ್ಲಿ ಆಯ್ಕೆಯಾದ ವಾರ್ಡ್ ನ ಸಂಪೂರ್ಣ ಸ್ವಚ್ಚತೆಗಾಗಿ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು.
ಇದರಂತೆ ನಡೆದ ಸಲಹಾ ಸಭೆಯಲ್ಲಿ, ಮೊದಲಿಗೆ ಎಲ್ಲಾ ವಾರ್ಡಳ ಹೆಸರನ್ನು ಬರೆದು ಒಂದು ಡಬ್ಬಿಯಲ್ಲಿ ಹಾಕಿ ಸಾರ್ವಜನಿಕರ ಎದುರು ಚೀಟಿ ಎತ್ತಿದರು ಮೊದಲಿಗೆ ಅರಬ್ ಮೊಹಲ್ಲಾ ವಾರ್ಡ್ ಆಯ್ಕೆಯಾಗಿದೆ. ವಾರ್ಡ್ ನ ಸಾರ್ವಜನಿಕರು ನಮ್ಮೊಂದಿಗೆ ಸ್ವಚ್ಚತಾ ಅಭಿಯಾನದಲ್ಲಿ ಕೈಜೋಡಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಜಾ ಪೀತ ಬ್ರಹ್ಮ ಕುಮಾರಿ ವಿಶ್ವ ವಿದ್ಯಾಲಯದ ಸ್ಮಿತಾ ಅಕ್ಕನವರು ಮಾತನಾಡಿ, ನಗರ ಸಭೆ ರಾಯಚೂರಿನ ಸಂಪೂರ್ಣ ಸ್ವಚ್ಛತೆಗಾಗಿ ವಿಶೇಷ ಪ್ರಯತ್ನ ಮಾಡುತ್ತಿದೆ ನಾವೆಲ್ಲರು ಸ್ವಚ್ಚತಾ ಕಾರ್ಯದಲ್ಲಿ ಕೈಜೋಡಿಸುವ ಮೂಲಕ ರಾಜ್ಯದಲ್ಲಿ ನಗರವನ್ನು ಸ್ವಚ್ಚ ನಗರವನ್ನಾಗಿ ಮಾಡಬೇಕೆಂದು ತಿಳಿಸಿದರು.
