ಬೆಂಗಳೂರು, 4 ಜನವರಿ(ಹಿ.ಸ):
ಆ್ಯಂಕರ್ :
ಹುಬ್ಬಳ್ಳಿಯಲ್ಲಿ ಕರಸೇವಕ ಶ್ರೀಕಾಂತ್ ಪೂಜಾರಿ ಹಾಗೂ ಇತರರ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ ತೀವ್ರಗೊಳಿಸಿದೆ. ಈ ಮಧ್ಯೆ, ಬಿಜೆಪಿ ಪ್ರತಿಭಟನೆಯ ಬೆಂಕಿಗೆ ತುಪ್ಪ ಸುರಿಯುವಂಥ ಹೇಳಿಕೆಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೀಡಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ಶ್ರೀಕಾಂತ್ ಪೂಜಾರಿ ಶ್ರೀರಾಮ ಅಥವಾ ಶ್ರೀಕೃಷ್ಣನಂತೆ ಆದರ್ಶ ಪುರುಷ ಅಲ್ಲ. ರಾಮಭಕ್ತನ ಸೋಗಿನಲ್ಲಿರುವ ವೃತ್ತಿಪರ ಕ್ರಿಮಿನಲ್ ಎಂದು ಟೀಕಿಸಿದ್ದಾರೆ.
‘ಹಳೆಯ ಪ್ರಕರಣವೊಂದರಲ್ಲಿ ಹುಬ್ಬಳ್ಳಿ ಪೊಲೀಸರು ಬಂಧಿಸಿರುವ ಶ್ರೀಕಾಂತ್ ಪೂಜಾರಿ ಶ್ರೀರಾಮನಂತೆ ಆದರ್ಶ ಪುರುಷನೂ ಅಲ್ಲ, ಶ್ರೀಕೃಷ್ಣನಂತೆ ಅವತಾರ ಪುರುಷನೂ ಅಲ್ಲ. ಆತ ವೃತ್ತಿಪರ ಕ್ರಿಮಿನಲ್ ಅಷ್ಟೆ. ಶ್ರೀಕಾಂತ್ ಪೂಜಾರಿ ವಿರುದ್ಧ 1992 ರಿಂದ 2014 ರವರೆಗೆ ಹುಬ್ಬಳ್ಳಿಯ ವಿವಿಧ ಠಾಣೆಗಳಲ್ಲಿ ಸುಮಾರು 16 ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ಇಂತಹ ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿ ರಾಮಭಕ್ತ ಎಂಬ ಸೋಗು ಹಾಕಿಕೊಂಡರೆ ಕಾನೂನು ಕ್ರಮ ತೆಗೆದುಕೊಳ್ಳಬಾರದೆ’ ಎಂದು ಗುಂಡೂರಾವ್ ಪ್ರಶ್ನಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
