ಬೆಂಗಳೂರು, 7 ಜನವರಿ(ಹಿ.ಸ):
ಆ್ಯಂಕರ್ :
ಕೆಎಸ್ಸಾರ್ಟಿಸಿಯಲ್ಲಿ ಪ್ರಯಾಣಿಸುವವರು ಇನ್ನು ಮೂರು ತಿಂಗಳ ನಂತರ ನಗದನ್ನು ತೆಗೆದುಕೊಂಡು ಹೋಗದಿದ್ದರೂ ಅರಾಮಾಗಿ ಬಸ್ನಲ್ಲಿ ಪ್ರಯಾಣಿಸಬಹುದು. ಏಕೆಂದರೆ ನಗದು ನೀಡುವ ಜಂಜಾಟದಿಂದ ಪ್ರಯಾಣಿಕರನ್ನು ಹೊರತರಲು ಮುಂದಾಗಿರುವ ಕೆಎಸ್ಸಾರ್ಟಿಸಿ, ಯುಪಿಐ, ಡೆಬಿಟ್, ಕ್ರೆಡಿಟ್ ಕಾರ್ಡ್ ಮುಂತಾದವುಗಳ ಮೂಲಕ ‘ಕ್ಯಾಶ್ ಲೆಸ್’ (ನಗದು ರಹಿತ) ಟಿಕೆಟಿಂಗ್ ವ್ಯವಸ್ಥೆ ಜಾರಿ ಮಾಡುತ್ತಿದೆ.
ಎಲ್ಲೆಡೆ ಕ್ಯಾಶ್ ಲೆಸ್ ವಹಿವಾಟು ನಡೆಯುತ್ತಿದ್ದು, ಅದರಿಂದಾಗಿ ಜನರು ತಮ್ಮೊಂದಿಗೆ ನಗದು ಇಟ್ಟುಕೊಳ್ಳುವುದನ್ನೇ ಕಡಿಮೆ ಮಾಡಿದ್ದಾರೆ. ಜನರ ಪರಿಪಾಠವನ್ನು ಅರಿತಿರುವ ಕೆಎಸ್ಸಾರ್ಟಿಸಿ, ತನ್ನ ಟಿಕೆಟಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ತರುತ್ತಿದೆ. ಸದ್ಯ ಇರುವ ನಗದು ವ್ಯವಹಾರದ ಜತೆಗೆ ಕ್ಯಾಶ್ ಲೆಸ್ ಟಿಕೆಟಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿರುವ ಕೆಎಸ್ಸಾರ್ಟಿಸಿ, ಏಪ್ರಿಲ್ ಅಥವಾ ಮೇ ವೇಳೆಗೆ ನೂತನ ವ್ಯವಸ್ಥೆ ಜಾರಿಗೊಳಿಸಲಿದೆ. ಅದಕ್ಕಾಗಿ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರ (ಸ್ಮಾರ್ಟ್ ಇಟಿಎಂ)ವನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ಮುಂದಾಗಿದೆ.
10 ಸಾವಿರ ಸ್ಮಾರ್ಟ್ ಇಟಿಎಂ:
ಕೆಎಸ್ಸಾರ್ಟಿಸಿಯು 2006ರಲ್ಲಿ ಸ್ಮಾರ್ಟ್ ಎಲೆಕ್ಟ್ರಾನಿಕ್ ಯಂತ್ರಗಳ ಮೂಲಕ ಟಿಕೆಟ್ ವಿತರಣೆ ವ್ಯವಸ್ಥೆ ಜಾರಿಗೊಳಿಸಿತ್ತು. ಅದರಲ್ಲಿ ಪ್ರಯಾಣಿಕರಿಂದ ನಗದು ಪಡೆದು ಮಾತ್ರ ಟಿಕೆಟ್ ನೀಡಲು ಸಾಧ್ಯವಾಗುತ್ತಿದೆ. ಆದರೆ, ಇದೀಗ ಟಿಕೆಟ್ ವಿತರಣೆಗೆ ಸ್ಮಾರ್ಟ್ ಇಟಿಎಂಗಳನ್ನು ಪರಿಚಯಿಸಲು ಮುಂದಾಗಿದೆ. ಸ್ಮಾರ್ಟ್ ಇಟಿಎಂಗಳನ್ನು ಮಾಸಿಕ ಬಾಡಿಗೆ ಆಧಾರದಲ್ಲಿ ಪಡೆಯಲು ನಿರ್ಧರಿಸಿದ್ದು, ಅದರ ಪೂರೈಕೆ ಮತ್ತು ನಿರ್ವಹಣೆ ಮಾಡುವವರಿಗಾಗಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಕೆಎಸ್ಸಾರ್ಟಿಸಿ ಒಟ್ಟು 10,245 ಸ್ಮಾರ್ಟ್ ಇಟಿಎಂಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯುತ್ತಿದೆ. ಮುಂದಿನ 5 ವರ್ಷದಲ್ಲಿ 15 ಸಾವಿರ ಸ್ಮಾರ್ಟ್ ಇಟಿಎಂಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ನಿರ್ಧರಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
