ಚಾಮರಾಜನಗರ, 15 ನವೆಂಬರ್ (ಹಿ.ಸ):
ಆ್ಯಂಕರ್ : ಆದಿವಾಸಿ ಜನರನ್ನು ಕಾಡಿನಿಂದ ನಾಡಿಗೆ ಕರೆತರಬೇಕು ಎನ್ನುವ ನಿಟ್ಟಿನಲ್ಲಿ ತಾವೆಲ್ಲರೂ ಪ್ರಭುದ್ದರಾಗಿ ತಮ್ಮ ಮಕ್ಕಳ ಶೈಕ್ಷಣಿಕ, ಅರೋಗ್ಯ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ನಮ್ಮ ಇಲಾಖೆಯ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ನಾಗೇಂದ್ರರವರು ತಿಳಿಸಿದರು.
ಬುಧವಾರ ಚಾಮರಾಜನಗರ ಜಿಲ್ಲಾ ಕೇಂದ್ರದ ಡಾ. ಬಿ. ಆರ್. ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಭಗವಾನ್ ಶ್ರೀ ಬಿರ್ಸಾಮುಂಡಾ ಜಯಂತಿ ಹಾಗೂ ಜನಜಾತೀಯ ಗೌರವ್ ದಿವಸ್ -2023 ರ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿ ಬಿರ್ಸಾಮುಂಡಾರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಬಿರ್ಸಾಮುಂಡಾ ರವರು ತಮ್ಮ 13ನೇ ವಯಸ್ಸಿನ ಬಾಲ್ಯ ಜೀವನದಲ್ಲಿ ಆದಿವಾಸಿ ಜನರಿಗೆ ಬ್ರಿಟಿಷರು ನೀಡುತಿದ್ದ ತೊಂದರೆಗಳ ವಿರುದ್ಧ ದಂಗೆ ಎದ್ದು ಅವರ ಕಣ್ಣೀರು ಒರೆಸುವ ನಾಯಕ & ಧ್ವನಿಯಾಗಿ ನಿಂತು ಅವರ ಜೀವನೋಪಾಯ ನಡೆಸಲು ಸಹಕರಿಸುತ್ತ ಬಂದು ಅಂದಿನ ಆದಿವಾಸಿ ಜನರಿಗೆ ನಿಜವಾದ ದೇವರು ಆಗಿದ್ದರು.
ಬುಡಕಟ್ಟು ಜನರ ಶ್ರೇಯೋಭಿವೃದ್ಧಿಗಾಗಿ ನಮ್ಮ ನುಡಿದಂತೆ ನಡೆದ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ರವರ ನೇತೃತ್ವದಲ್ಲಿ ಸರ್ಕಾರ ಕಾಡಿನಲ್ಲಿ ಜೀವನ ನಡೆಸುವ ಜನರಿಗೆ ತಮ್ಮ ದಿನನಿತ್ಯ ಜೀವನಕ್ಕೆ ತೊಂದರೆ ಹಾಗೂ ಅರೋಗ್ಯದ ಹಿತದೃಷ್ಟಿಯಿಂದ ಈ ಹಿಂದಿನ ಸರ್ಕಾರದಲ್ಲಿ 6 ತಿಂಗಳು ಮಾತ್ರ ನೀಡುತ್ತಿದ್ದ ಪೌಷ್ಟಿಕ ಆಹಾರ ಕಿಟ್ ಗಳನ್ನು ಇದೀಗ 12 ತಿಂಗಳಿಗೆ ವಿಸ್ತರಿಸಿ ಬುಡಕಟ್ಟು ಜನರೊಂದಿಗೆ ರಾಜ್ಯ ಸರ್ಕಾರ ಎಂದು ನಿರೂಪಿಸಿದ್ದೇವೆ. ಪರಿಶಿಷ್ಟ ಪಂಗಡದ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ ಈಗಾಗಲೇ ಕಛೇರಿ ಕೂಡ ಉದ್ಘಾಟನೆ ಆಗಿದೆ. ಇಡೀ ರಾಜ್ಯದಲ್ಲಿ ಬುಡಕಟ್ಟು ಜನರಿಗೆ ಯಾವುದೇ ತೊಂದರೆ ಬಂದರು ನಿಮ್ಮ ತಮ್ಮ, ಅಣ್ಣ, ಮನೆಮಗನಾಗಿ ನಾನು ಸದಾ ನಿಮ್ಮೊಂದಿಗೆ ಇರುವೆ, ಆದಿವಾಸಿ ಜನರು ನನಗೆ ಸ್ವಾಗತ ಬಯಸುವ ವೇಳೆ ಹಾಕಿದ ಕಾಡಿನಲ್ಲಿನ ಬಳ್ಳಿಯಿಂದ ತಯಾರಿಸಿದ ಆ ಹಾರಕ್ಕೆ ಬೆಲೆಕಟ್ಟಾಲಾರೆನು, ನಿಜವಾದ ಪ್ರೀತಿ, ಮಮತೆ ಭಾಂದವ್ಯ ನನಗೆ ತೋರಿದ್ದಿರಿ ನಿಮ್ಮ ಜೊತೆಗೆ ನಮ್ಮ ಸರ್ಕಾರ, ಜಿಲ್ಲಾಡಳಿತ ಇರುವ ತಾವೆಲ್ಲರೂ ನಿರ್ಭಯವಾಗಿ ಇರಿ ಎಂದು ತಿಳಿಸಿದರು
ಈ ಸಂಧರ್ಭದಲ್ಲಿ ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ರವರು, ಚಾಮರಾಜನಗರ ಶಾಸಕರಾದ ಸಿ. ಪುಟ್ಟರಂಗಶೆಟ್ಟಿರವರು, ಕೊಳ್ಳೇಗಾಲ ಕ್ಷೇತ್ರದ ಶಾಸಕರಾದ ಎ. ಆರ್. ಕೃಷ್ಣಮೂರ್ತಿ, ಹನೂರು ಕ್ಷೇತ್ರದ ಶಾಸಕ ಮಂಜುನಾಥ್, ಎಂ. ಎಲ್. ಸಿ. ಮರಿತಿಪ್ಪೇಗೌಡ, ನಗರಸಭಾ ಸದಸ್ಯರಾದ ಎಂ. ಮಹೇಶ್, ಬುಡಕಟ್ಟು ಸಮುದಾಯ ಮುಖಂಡರಾದ ಸಿ. ಮಾದೇಗೌಡ, ವಿ. ಮುತ್ತಯ್ಯ ಚಾಮರಾಜನಗರ ಜಿಲ್ಲಾಧಿಕಾರಿಗಳಾದ ಶಿಲ್ಪಾನಾಗ್, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ನಿರ್ದೇಶಕರಾದ ಬಿ. ಕಲ್ಲೇಶ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಪದ್ಮಿನಿ ಸಾಹು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಆನಂದ್ ಪ್ರಕಾಶ್ ಮೀನಾ,ಜಿಲ್ಲಾ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಪ್ರೊ. ಶ್ರೀನಿವಾಸ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳ.ಕೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್
