ಬೆಂಗಳೂರು, 12 ಜನವರಿ(ಹಿ.ಸ):
ಆ್ಯಂಕರ್ :
ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದ ಐದನೇ ಉಚಿತ ಗ್ಯಾರಂಟಿ ಯೋಜನೆ ಯುವ ನಿಧಿಗೆ ಇಂದು (ಶುಕ್ರವಾರ, ಜನವರಿ 12) ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಾಲನೆ ನೀಡಲಿದ್ದಾರೆ. ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದಿದ್ದೇವೆ ಎನ್ನುತ್ತಿರುವ ಕಾಂಗ್ರೆಸ್ ಇದೀಗ ಲೋಕಸಭೆ ಚುನಾವಣೆ ಹತ್ತಿರವಾಗ್ತಿರುವ ಸಂದರ್ಭದಲ್ಲಿ 5 ನೇ ಗ್ಯಾರಂಟಿ ಯೋಜನೆಯಾದ ಯುವ ನಿಧಿಯನ್ನು ಜಾರಿಗೆ ತರುತ್ತಿದೆ. ಈಗಾಗಲೇ ಯುವನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಚಾಲನೆ ಸಿಕ್ಕಿದೆ. ಆನ್ಲೈನ್ ಮೂಲಕ ಈವರೆಗೆ 65 ಸಾವಿರಕ್ಕೂ ಹೆಚ್ಚು ಪದವಿ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಂದ ನೋಂದಣಿ ಮಾಡಿಕೊಂಡಿದ್ದಾರೆ.
ನೋಂದಣಿ ಮಾಡಿಕೊಂಡವರ ಫಲಾನುಭವಿಗಳ ಖಾತೆಗೆ ಹಣವನ್ನು ವರ್ಗಾಯಿಸುವ ಪ್ರಕ್ರಿಯೆಗೆ ಬಿಜೆಪಿಯ ಭದ್ರಕೋಟೆಯಾಗಿರುವ ಮಲೆನಾಡು ಶಿವಮೊಗ್ಗದಲ್ಲೇ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ.
ವಿವೇಕಾನಂದ ಜಯಂತಿಯಂದೇ ‘ಯುವನಿಧಿ’ಗೆ ಚಾಲನೆ
ಇಂದು ಯುವಜನತೆಯ ಸ್ಫೂರ್ತಿ ಪುರುಷನಾದ ಸ್ವಾಮಿ ವಿವೇಕಾನಂದ ಜಯಂತಿ. ಈ ದಿನವನ್ನು ರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿಯೂ ಆಚರಿಸಲಾಗ್ತಿದೆ. ಈ ದಿನವೇ ಶಿವಮೊಗ್ಗದ ಫ್ರೀಡಂ ಪಾರ್ಕ್ನಲ್ಲಿಂದು ನಡೆಯುವ ಕಾರ್ಯಕ್ರಮದಲ್ಲಿ ಯುವನಿಧಿಗೆ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗುತ್ತೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಚಾಲನೆ ಸಿಗಲಿದೆ. 2022-23ನೇ ಸಾಲಿನಲ್ಲಿ ಪಾಸಾದ ನಿರುದ್ಯೋಗಿಗಳು ಯೋಜನೆಗೆ ಅರ್ಹರಾಗಿದ್ದು, ಒಟ್ಟು 5.29 ಲಕ್ಷ ಫಲಾನುಭವಿಗಳಿಗೆ ಇದರ ಪ್ರಯೋಜನ ಲಭ್ಯವಾಗಲಿದೆ.
ಹಿಂದೂಸ್ತಾನ್ ಸಮಾಚಾರ್
