
ಬೆಂಗಳೂರು, 31ಡಿಸೆಂಬರ್(ಹಿ.ಸ):
ಆ್ಯಂಕರ್ :
ನೂತನ ವರ್ಷ ಸ್ವಾಗತಿಸುವ ಸಂಭ್ರಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಂ.ಜಿ ರಸ್ತೆ ಸೇರಿದಂತೆ ರಾಜಧಾನಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ. ಹೊಸ ವರ್ಷಾಚರಣೆಗೆ ಡಿ.31ರ ರಾತ್ರಿ 1 ಗಂಟೆವರೆಗೆ ಕಾಲಾವಕಾಶ ನೀಡಿರುವ ಪೊಲೀಸರು, ರಾತ್ರಿ ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ಬಿಸಿ ಮುಟ್ಟಿಸಲು ಚೆಕ್ ಪೋಸ್ಟ್ಗಳು ಹಾಗೂ ಠಾಣಾ ಮಟ್ಟದಲ್ಲಿ ವಿಶೇಷ ತಂಡಗಳನ್ನು ರಚಿಸಿದ್ದಾರೆ.
ನಗರದಲ್ಲಿ ಹೊಸ ವರ್ಷಾಚರಣೆಯ ಕೇಂದ್ರ ಬಿಂದು ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಯ ಬಂದೋಬಸ್ತ್ ಬಗ್ಗೆ ಶನಿವಾರ ರಾತ್ರಿ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ನಗರ ವ್ಯಾಪ್ತಿ ಇಬ್ಬರು ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತ, 15 ಡಿಸಿಪಿ, 45 ಎಸಿಪಿ, 160 ಇನ್ಸ್ಪೆಕ್ಟರ್, 600 ಪಿಎಸ್ಐ, 600 ಎಎಸ್ಐ, 1800 ಎಚ್ಸಿ, 5200 ಕಾನ್ಸ್ಟೇಬಲ್ಗಳು ಸೇರಿ ಒಟ್ಟು 8500 ಪೊಲೀಸರು ನಿಯೋಜಿತರಾಗಿದ್ದಾರೆ. ಇವರಲ್ಲದೆ ನಗರ ಸಶಸ್ತ್ರ ಹಾಗೂ ರಾಜ್ಯ ಸಶಸ್ತ್ರ ಮೀಸಲು ಪಡೆಗಳು ಹಾಗೂ ಸಂಚಾರ ವಿಭಾಗದ ಪೊಲೀಸರು ಸಹ ಪಾಲ್ಗೊಳ್ಳಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
