ಬೆಂಗಳೂರು,15 ಅಕ್ಟೋಬರ್ (ಹಿ.ಸ):
ಆ್ಯಂಕರ್ :
ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳು ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಮಾವಾಸ್ಯೆ ದಿನದಂದು ಕಾರ್ಯಾಚರಣೆ ನಡೆಸಿ ಕೋಟಿ ಕೋಟಿ ಹಣ ಪತ್ತೆ ಮಾಡಿದ್ದಾರೆ. ರಾಜಾಜಿನಗರದ ಕೇತಮಾರನಹಳ್ಳಿ ಅಪಾರ್ಟ್ಮೆಂಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು ಈ ವೇಳೆ 40 ಕೋಟಿಗೂ ಹೆಚ್ಚು ಹಣ ಪತ್ತೆಯಾಗಿದೆ. ನಿನ್ನೆ (ಅ.14) ಬೆಳಗ್ಗೆ ಬಿಲ್ಡರ್ ಸಂತೋಷ್ ನಿವಾಸದ ಮೇಲೆ ಐಟಿ ತಂಡ ದಾಳಿ ನಡೆಸಿತ್ತು. ಬೆಳಗ್ಗೆ 6ರಿಂದ ಇಡೀ ದಿನ ಅಪಾರ್ಟ್ಮೆಂಟ್ನ 5ನೇ ಮಹಡಿಯ ಫ್ಲ್ಯಾಟ್ನಲ್ಲಿ ದಾಖಲೆ ಪರಿಶೀಲನೆ ನಡೆಸಿತ್ತು. ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆಯಾಗಿದ್ದು ಆ ಹಣ ಮಾಜಿ ಎಂಎಲ್ಸಿಗೆ ಸೇರಿದ್ದು ಎನ್ನಲಾಗಿದೆ.
ಬಿಲ್ಡರ್ ಸಂತೋಷ್ ಮನೆಯಲ್ಲಿ ಹಣ ಪತ್ತೆಯಾದ ಬಗ್ಗೆ ವಿಚಾರಣೆ ನಡೆಸಿದಾಗ ಸಂತೋಷ್ ಮಾಜಿ ಎಂ ಎಲ್ ಸಿ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಹೀಗಾಗಿ ಐಟಿ ಅಧಿಕಾರಿಗಳು ಪತ್ತೆಯಾದ ಹಣದ ಮೂಲ ಕಂಡು ಹಿಡಿಯಲು ಮಾಜಿ ಎಂಎಲ್ಸಿ ಸಹೋದರರನ್ನು ಫ್ಲ್ಯಾಟ್ಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಹಣ ಪತ್ತೆಯಾಗುತ್ತಿದ್ದಂತೆ 6ಕ್ಕೂ ಹೆಚ್ಚು ಕಾರುಗಳಲ್ಲಿ 10ಕ್ಕೂ ಹೆಚ್ಚು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
