
ಬೆಂಗಳೂರು , 16ನವೆಂಬರ್ (ಹಿ.ಸ):
ಆ್ಯಂಕರ್ :ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದ್ದು, ಸುಮಾರು ಆರು ತಿಂಗಳಿಂದ ಬಾಕಿ ಉಳಿದಿರುವ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ. ಅಂದು ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಬಿಜೆಪಿಯ ಕೇಂದ್ರ ಘಟಕದಿಂದ ವೀಕ್ಷಕರು ಆಗಮಿಸಲಿದ್ದಾರೆ. ಅವರು ಶಾಸಕರೊಂದಿಗೆ ಸಮಾಲೋಚನೆ ನಡೆಸಿ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಜವಾಬ್ದಾರಿ ಹೊರುವ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಆದರೆ, ಅದೇ ದಿನ ಹೆಸರನ್ನು ಘೋಷಿಸುವ ಬಗ್ಗೆ ಸ್ಪಷ್ಟತೆ ಇಲ್ಲ. ವೀಕ್ಷಕರು ಇಲ್ಲಿ ಅಭಿಪ್ರಾಯ ಸಂಗಹಿಸಿ ದೆಹಲಿಗೆ ವಾಪಸಾದ ಬಳಿಕ ವರಿಷ್ಠರೊಂದಿಗೆ ಚರ್ಚಿಸಿ ನಂತರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ. ಇದೇ ವೇಳೆ ವಿಜಯೇಂದ್ರ ಅವರು ಮುಂದಿನ ವಾರ ದೆಹಲಿಗೆ ತೆರಳುವುದರಿಂದ ಅವರು ವಾಪಸಾದ ಬಳಿಕ ಅಂತಿಮಗೊಳ್ಳುವ ಸಂಭವವೂ ಇದೆ ಎನ್ನಲಾಗಿದೆ. ಈ ಸ್ಥಾನಕ್ಕೆ ಶಾಸಕರಾದ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ವಿ.ಸುನೀಲ್ಕುಮಾರ್ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.
ಹಿಂದೂಸ್ತಾನ್ ಸಮಾಚಾರ್
