ಬೆಂಗಳೂರು, 23 ಜನವರಿ(ಹಿ.ಸ):
ಆ್ಯಂಕರ್ :- ನಿಗಮ ಮಂಡಳಿಯ ನೇಮಕಾತಿಯಲ್ಲಿ ರಾಜ್ಯನಾಯಕರುಗಳೊಂದಿಗೆ ಸಮಾಲೋಚನೆ ನಡೆಸಲು ಹೈಕಮಾಂಡ್ ನಾಯಕರೇ ಪಟ್ಟಿ ತಯಾರಿಸುವುದರಿಂದಾಗಿ ಗೊಂದಲಗಳಾಗಿವೆ. ಅದನ್ನು ಸರಿಪಡಿಸುತ್ತಿರುವುದರಿಂದಾಗಿ ವಿಳಂಬವಾಗುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಈ ಮೂಲಕ ನಿಗಮಮಂಡಳಿಯ ನೇಮಕಾತಿಯಲ್ಲಿ ಹೈಕಮಾಂಡ್ ಹಸ್ತಕ್ಷೇಪದ ಬಗ್ಗೆ ಪರಮೇಶ್ವರ್ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೇಮಕಾತಿ ಪಟ್ಟಿಗೆ ಸಂಬಂಧಪಟ್ಟಂತೆ ತಮ್ಮೊಂದಿಗೆ ಯಾರೂ ಚರ್ಚಿಸಿಲ್ಲ, ಅಭಿಪ್ರಾಯವನ್ನೂ ಕೇಳಿಲ್ಲ. ನಿಮ್ಮ ಕಡೆಯ ಒಂದೆರೆಡು ಹೆಸರುಗಳನ್ನು ಕೊಡಿ ಎಂದಷ್ಟೇ ಕೇಳಿದ್ದರು ಎಂದು ಸ್ಪಷ್ಟಪಡಿಸಿದರು. ಹೈಕಮಾಂಡ್ ನಾಯಕರಿಗೆ ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವವರ ಪೂರ್ಣ ಮಾಹಿತಿ ಇರುವುದಿಲ್ಲ. ಜಿಲ್ಲಾ ಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ನಮ್ಮಂತಹ ನಾಯಕರುಗಳಿಗೆ ಹೆಚ್ಚಿನ ವಿವರಗಳಿರುತ್ತವೆ. ನಮ್ಮಂತವರ ಜೊತೆ ಚರ್ಚೆ ಮಾಡಬೇಕಿತ್ತು. ಹೈಕಮಾಂಡ್ನವರಿಗೆ ಮಾಹಿತಿ ಇರುವುದಿಲ್ಲ ಎಂದರು.
ಜೊತೆಗೆ ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರಿಗೆ ನೇಮಕಾತಿಯ ಹೊಣೆಗಾರಿಕೆಯನ್ನು ಬಿಡಬೇಕಿತ್ತು. ಆದರೆ ಎಐಸಿಸಿಯ ಪ್ರಧಾನ ಕಾರ್ಯದರ್ಶಿಯವರೇ ನೇರವಾಗಿ ಪಟ್ಟಿ ನೀಡುತ್ತಿದ್ದಾರೆ. ಅದರಿಂದಾಗಿ ವಿಳಂಭವಾಗುತ್ತಿದೆ ಎಂದು ಹೇಳಿದರು.
ತಾವು 8 ವರ್ಷ ಕಾಂಗ್ರೆಸ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಕಳೆದ ಚುನಾವಣೆ ಹಾಗೂ ಸತತವಾಗಿ ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡಿದವರು ಯಾರು ಎಂದು ತಮಗೆ ಮಾಹಿತಿ ಇರುತ್ತದೆ. ನಮ್ಮೊಂದಿಗೆ ಚರ್ಚೆ ನಡೆಸದೇ ಇರುವುದರಿಂದಲೇ ಗೊಂದಲವಾಗುತ್ತದೆ ಎಂದರು.
ಹಿಂದೂಸ್ತಾನ್ ಸಮಾಚಾರ್
