ಧಾರವಾಡ, 4 ಜನವರಿ(ಹಿ.ಸ):
ಆ್ಯಂಕರ್ :: ಇಡೀ ದೇಶವೇ ಕಾತುರದಿಂದ ಕಾಯುತ್ತಿರುವ ದಿನ ಜನವರಿ 22. ಏಕೆಂದರೆ ಆ ದಿನ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಅಯೋಧ್ಯೆಯಲ್ಲಿ ತಲೆ ಎತ್ತಿ ನಿಲ್ಲಲಿದ್ದಾನೆ. ಆ ದಿನವನ್ನು ಕಣ್ತುಂಬಿಸಿಕೊಳ್ಳಲು ಇಡೀ ದೇಶವೇ ತುದಿಗಾಲ ಮೇಲೆ ನಿಂತಿದೆ. ಈಗಾಗಲೇ ಪ್ರಭು ಶ್ರೀರಾಮಚಂದ್ರನ ಪ್ರಾಣಪ್ರತಿಷ್ಠಾಪನೆಗಾಗಿ ದೇಶದ ಮೂಲೆ ಮೂಲೆಗಳಿಂದ ಬಗೆ ಬಗೆ ವಸ್ತುಗಳು ಹೋಗುತ್ತಿವೆ. ಇದಕ್ಕೆ ನಮ್ಮ ಹೆಮ್ಮೆಯ ಧಾರವಾಡ ಕೂಡ ಹೊರತಾಗಿಲ್ಲ.
ವಿದ್ಯಾಕಾಶಿ ಧಾರವಾಡ ವಿಶಿಷ್ಟತೆಗಳಲ್ಲಿ ವಿಶಿಷ್ಟತೆ ಹೊಂದಿದ ಜಿಲ್ಲೆ. ಈ ಜಿಲ್ಲೆಯಿಂದ ಇದೀಗ ಮರ್ಯಾದಾ ಪುರುಷೋತ್ತಮನಿಗೆ ಕಂಬಳಿಗಳು ಹೋಗುತ್ತಿವೆ. ರೈತರು ಈ ಕಂಬಳಿಗಳನ್ನು ದೇವರ ಸ್ವರೂಪದಲ್ಲಿ ಕಾಣುತ್ತಾರೆ. ಶುಭ ಕಾರ್ಯಗಳಿಗೆ ಈ ಕಂಬಳಿಗಳು ಬೇಕೇ ಬೇಕು.
ಇದೀಗ ಧಾರವಾಡದಲ್ಲಿ ಶ್ರೀರಾಮ ಚಂದ್ರನಿಗಾಗಿಯೇ ವಿಶೇಷವಾಗಿ ತಯಾರಿಸಲಾದ ಕಂಬಳಿಗಳು ಅಯೋಧ್ಯೆಗೆ ಹೊರಟಿವೆ. ಧಾರವಾಡದ ರೈತರ ಓಣಿ ಎಂದೇ ಕರೆಯಲಾಗುವ ಕಮಲಾಪುರ ಬಡಾವಣೆಯ ಸುಭಾಷ ರಾಯಣ್ಣವರ ಅವರು ಮೂರು ತಲೆಮಾರುಗಳಿಂದ ಕಂಬಳಿ ಕಟ್ಟುತ್ತಾ ಬಂದಿದ್ದಾರೆ. ಇದೀಗ ಸುಭಾಷ್ ಅವರು ಅಯೋಧ್ಯೆಗೆ ಕಳುಹಿಸಲೆಂದೇ ಎರಡು ಕಂಬಳಿಗಳನ್ನು ಕಟ್ಟಿದ್ದಾರೆ. ಅಲ್ಲದೇ ಅವುಗಳನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮೂಲಕ ಅಯೋಧ್ಯೆಗೆ ಕಳುಹಿಸುವ ವ್ಯವಸ್ಥೆ ಕೂಡ ಮಾಡಿಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
