ಬೆಂಗಳೂರು, 1 ಡಿಸೆಂಬರ್(ಹಿ.ಸ):
ಆ್ಯಂಕರ್ :
ರಾಷ್ಟ್ರೀಯ ಸರಾಸರಿಗಿಂತ ಕರ್ನಾಟಕದಲ್ಲಿ ಏಡ್ಸ್ ಸೋಂಕಿತರ ಸಂಖ್ಯೆ ಶೇ 0.29 ರಷ್ಟು ಹೆಚ್ಚಾಗಿದೆ. ರಾಷ್ಟ್ರೀಯ ಸರಾಸರಿ ಶೇ 0.22 ರಷ್ಟಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ದ ಅಂಕಿಅಂಶಗಳ ಪ್ರಕಾರ ಏಡ್ಸ್ ರೋಗದಿಂದ ಬಳಲುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಶೇ 1.61 ಮೂಲಕ ನಾಗಾಲ್ಯಾಂಡ್ ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕವು ಒಂಬತ್ತನೇ ಸ್ಥಾನದಲ್ಲಿದೆ. ನಾಗಾಲ್ಯಾಂಡ್ ನಂತರ ಮಿಜೋರಾಂನಲ್ಲಿ ಶೇ 1.13, ಮೇಘಾಲಯದಲ್ಲಿ ಶೇ 0.58, ದೆಹಲಿಯಲ್ಲಿ ಶೇ 0.41, ತ್ರಿಪುರ ಮತ್ತು ಚಂಡೀಗಢ ತಲಾ ಶೇ 0.38, ಆಂಧ್ರ ಪ್ರದೇಶದಲ್ಲಿ ಶೇ 0.37, ಮಣಿಪುರದಲ್ಲಿ ಶೇ 0.33, ಮತ್ತು ಕರ್ನಾಟಕದಲ್ಲಿ ಶೇ 0.29 ರಷ್ಟು ಜನರಿಗೆ ಹೆಚ್ಐವಿ ಸೋಂಕು ತಗುಲಿದೆ. ಡಿಸೆಂಬರ್ 1 ಅನ್ನು ವಿಶ್ವ ಏಡ್ಸ್ ದಿನವಾಗಿ ಆಚರಿಸಲಾಗುತ್ತದೆ.
ದೇಶದಲ್ಲಿ ಹೆಚ್ಚಾಗಿ ಏಡ್ಸ್ ರೋಗದಿಂದ ಬಳಲುತ್ತಿರುವವರು 15-49 ವರ್ಷದ ಒಳಗಿನವರು. 2000ನೇ ಇಸ್ವಿಯಲ್ಲಿ ಹೆಚ್ಐವಿ ಸೋಂಕಿತರ ಸಂಖ್ಯೆ 0.55 ರಷ್ಟಿತ್ತು. 2010 ರಲ್ಲಿ ಸೋಂಕಿತರ ಸಂಖ್ಯೆ 0.32 ರಷ್ಟು ಇದ್ದರೇ 2021 ರಲ್ಲಿ 0.22 ರಷ್ಟು ಜನರು ಏಡ್ಸ್ ರೋಗದಿಂದ ಬಳಲುತ್ತಿದ್ದರು. ಹೆಚ್ಚಾಗಿ ಈಶಾನ್ಯ ರಾಜ್ಯಗಳ ವಯಸ್ಕರು ಏಡ್ಸ್ ರೋಗದಿಂದ ಬಳಲುತ್ತಿದ್ದಾರೆ. ಮಿಜೋರಾಂನಲ್ಲಿ ಶೇ2.70, ನಾಗಾಲ್ಯಾಂಡ್ನಲ್ಲಿ ಶೇ1.36 ಮತ್ತು ಮಣಿಪುರದಲ್ಲಿ ಶೇ1.05 ರಷ್ಟು ಜನರು ಏಡ್ಸ್ ರೋಗದಿಂದ ಬಳಲುತ್ತಿದ್ದಾರೆ.
ನಂತರದ ಸ್ಥಾನದಲ್ಲಿ ದಕ್ಷಿಣ ಭಾರತ ರಾಜ್ಯಗಳಿವೆ. 2021ರ ಅಂಕಿಅಂಶಗಳ ಪ್ರಕಾರ, ಆಂಧ್ರಪ್ರದೇಶದಲ್ಲಿ ಶೇ 0.67ರಷ್ಟು, ತೆಲಂಗಾಣದಲ್ಲಿ ಶೇ 0.47 ರಷ್ಟು ಮತ್ತು ಕರ್ನಾಟಕದಲ್ಲಿ ಶೇ0.46 ರಷ್ಟು ಜನರು ಏಡ್ಸ್ ರೋಗದಿಂದ ಬಳಲುತ್ತಿದ್ದಾರೆ. ಕರ್ನಾಟಕದಲ್ಲಿ ಹೆಚ್ಐವಿ ಟೆಸ್ಟ್ ಪಾಸಿಟಿವಿಟಿ ರೇಟ್ (TPR) ಇಳಿಮುಖವಾಗುತ್ತಿದೆ. 2017ರಿಂದ ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಹೆಚ್ಐವಿ ರೋಗ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್
