ಬೆಂಗಳೂರು, 22 ನವೆಂಬರ್ (ಹಿ.ಸ):
ಆ್ಯಂಕರ್ : ಕನ್ನಡ ಸಾಹಿತ್ಯ ಪರಿಷತ್ತು ೨೦೨೩ ನೇ ಸಾಲಿನ ʻದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿʼ ಪ್ರಶಸ್ತಿಗೆ ದತ್ತಿ ದಾನಿಗಳ ಆಶಯದಂತೆ ಮಂಡ್ಯ ಜಿಲ್ಲೆಯ ಒಬ್ಬರು ಜನಪದ ಕಲಾವಿದರು ಸೇರಿದಂತೆ ರಾಜ್ಯದಲ್ಲಿ ಜಾನಪದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಮೂರು ಜನರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿʼ ಪ್ರಶಸ್ತಿಯನ್ನು ಮಂಡ್ಯ ಜಿಲ್ಲೆಯ ಹಿರಿಯ ಸಮಾಜಸೇವಕರಾದ ಎಸ್. ಎಮ್. ಶಂಕರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದು. ಪ್ರತಿ ವರ್ಷ ಜನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಗುರುತಿಸಿ ಗೌರವಿಸಲಾಗುತ್ತದೆ. ೨೦೨೩ನೇ ಸಾಲಿನ ʻದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿʼ ಪ್ರಶಸ್ತಿಯನ್ನು ಮಂಡ್ಯ ಜಿಲ್ಲೆ ನಾಗಮಂಗಲದ ಡಿ.ವಿ.ರುದ್ರೇಶ್, ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ವಡ್ಡಗೆರೆ ಕದರಮ್ಮ ಹಾಗೂ ಮದ್ದೂರು ತಾಲೂಕಿನ ಸಿ.ಎನ್. ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾನಪದ ಕಲಾವಿದರಿಗಾಗಿಯೇ ಮೀಸಲಾಗಿರುವ ʻದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿ ಪ್ರಶಸ್ತಿಯನ್ನು ಜನಪದ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗಾಗಿ ಮೀಸಲಿಡಲಾಗಿದ್ದು. ಜನಪದ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತ ಉತ್ತಮ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಗಳನ್ನು ಕೊಡಲಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.
ʻದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷತೆ ವಹಿಸಿದ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಸ್ತುತ ದತ್ತಿ ಪ್ರಶಸ್ತಿಗಳು ಜಾನಪದ ಕ್ಷೇತ್ರಕ್ಕೆ ಮೀಸಲಿದ್ದು ಗ್ರಾಮಾಂತರ ಭಾಗದಲ್ಲಿ ತಮ್ಮ ನಿತ್ಯ ಬದುಕಿನಲ್ಲಿ ಸದ್ದಿಲ್ಲದೆ ಜನಪದ ಕಲೆಯನ್ನು ವಿಸ್ತರಿಸುತ್ತಿರುವ ಸಾಧಕರನ್ನು ಗುರುತಿಸಿ ಪ್ರಸ್ತುತ ದತ್ತಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ನವೆಂಬರ್ ೨೯ರ ಬುಧವಾರ ಬೆಳಗ್ಗೆ ೧೦.೩೦ಕ್ಕೆ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ಕೆ.ಪಿಎಸ್ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದೆ ಎಂದು ತಿಳಿಸಿದರು.
ಡಾ. ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರ, ಬಿ.ಎಂ. ರಮೇಶ್ಗೌಡ, ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಬಿ.ಎಂ. ಅಪ್ಪಾಜಪ್ಪ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಮತ್ತು ಗೌರವ ಕೋಶಾಧ್ಯಕ್ಷ ಡಾ. ಬಿ.ಎಂ.ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್
