ಬೆಂಗಳೂರು, ಡಿಸೆಂಬರ್ 10 (ಕರ್ನಾಟಕ ವಾರ್ತೆ):
ಆ್ಯಂಕರ್ : ನಗರ ಜೀವನದ ಒತ್ತಡದಲ್ಲಿ ಜೀವಿಸುತ್ತಿರುವ ಬೆಂಗಳೂರಿಗರಿಗೆ ಕರ್ನಾಟಕದ ವೈವಿಧ್ಯಮಯ ಜಾನಪದ ಕಲೆಗಳನ್ನು ತಲುಪಿಸುವ ಪರಿಚಯಿಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದಲ್ಲಿ ಪ್ರಯತ್ನಗಳು ಆಗಬೇಕಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ಶಿವರಾಜ ತಂಗಡಗಿ ಅವರು ತಿಳಿಸಿದರು.
ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಆಯೋಜನೆ ಮಾಡಲಾಗಿದ್ದ ನಮ್ಮ ಜಾತ್ರೆ, ಜಾನಪದ ಸಂಭ್ರಮ ಕಾರ್ಯಕ್ರಮವನ್ನು ದೇಸಿದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಸಚಿವರು ಕನ್ನಡ ನಾಡಿನ ಭಾಷೆ ಮತ್ತು ಸಂಸ್ಕøತಿ ಎಲ್ಲರನ್ನು ಆಕರ್ಷಿಸುವಂತಹದ್ದು ಆದರೆ ನಾವು ಬೆಂಗಳೂರಿನಲ್ಲಿ ಕನ್ನಡ ಭಾಷೆ ಬಳಕೆಯನ್ನು ಕಡಿಮೆ ಮಾಡಿದ್ದೇವೆ, ಅನ್ಯ ಭಾಷೆಯ ವ್ಯಮೋಹ ಬಿಡದೆ ಇದ್ದರೆ ಬೆಂಗಳೂರಿನಲ್ಲಿ ಕನ್ನಡದ ಬೆಳವಣಿಗೆ ಆಗಲಾರದು ಎಂದು ಅವರು ಹೇಳಿದರು. ಇಂಗ್ಲಿಷ್ ಜೀವನಕ್ಕೆ ಬೇಕು, ಅದನ್ನು ಕಲಿಯಿರಿ ,ಆದರೆ ನಮ್ಮ ದಿನನಿತ್ಯದ ಆಡು ಭಾಷೆಯಾಗಿ ಕನ್ನಡವನ್ನು ಬಳಸಿರಿ, ಅದು ನಮ್ಮ ಭಾವಭಾಷೆ ,ಆದ್ದರಿಂದ ಯುವ ಜನರು ಕನ್ನಡ ಬಳಸ ಬೇಕು ಎಂದು ಅವರು ಕರೆ ನೀಡಿದರು.
ದೂರದ ಪಂಜಾಬಿನಿಂದ ಬಂದ ನಟಿ ಪೂಜಾ ಗಾಂಧಿ ಕನ್ನಡ ಕಲಿತು ಅದರಲ್ಲಿ ಮಾತನಾಡುವುದನ್ನು ರೂಡಿಸಿಕೊಂಡಿದ್ದಾರೆ, ಅದು ಶ್ಲಾಘನೀಯ. ಅವರಂತೆಯೇ ಇತರರೂ ಸಹ ಕನ್ನಡ ಕಲಿತು ಬಳಸುವಂತಾದರೆ ಕನ್ನಡದ ಏಳಿಗೆ ತನಗೆ ತಾನೆ ಆಗುತ್ತದೆ ಎಂದರು.
ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವರ್ಷಪೂರ್ತಿ ಪ್ರತಿ ತಿಂಗಳು ಇಂತಹ ದೊಡ್ಡ ,ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಿದೆ. ನಾಲ್ಕು ಕಂದಾಯ ವಿಭಾಗಗಳಲ್ಲಿಯೂ ಮುಂದಿನ ನಾಲ್ಕು ತಿಂಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ,ಆನಂತರ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಮತ್ತೊಂದು ಸುವರ್ಣ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ನಟಿ ಪೂಜಾ ಗಾಂಧಿ ಅವರು ಮಾತನಾಡಿ ಕನ್ನಡ ಅತ್ಯಂತ ಸುಂದರವಾದ ಭಾಷೆ , ತಮ್ಮ ಮಾತಿನಲ್ಲಿ ಬಸವೇಶ್ವರರ ವಚನವನ್ನು ಉಲ್ಲೇಖಿಸಿದ ಅವರು ಕನ್ನಡ ನಾಡಿನಲ್ಲಿರುವ ಪ್ರತಿಯೊಬ್ಬರು ಕನ್ನಡದ ಬಗ್ಗೆ ಗೌರವ, ಆದರಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಕನ್ನಡ ಭಾಷೆ, ಸಂಸ್ಕøತಿಗೆ ಪುರಾತನ ಇತಿಹಾಸವಿದೆ. ನಮ್ಮ ಜಾತ್ರೆ ಕಾರ್ಯಕ್ರಮದ ಮೂಲಕ ಕನ್ನಡ ಭಾಷೆ, ಸಂಸ್ಕøತಿಯನ್ನು ಎಲ್ಲೆಡೆ ಪಸರಿಸುವ ಕೆಲಸ ಮಾಡೋಣ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿ ದೇವಿ ಮಾಲಗತ್ತಿ ಅವರು ಸ್ವಾಗತಭಾಷಣ ಮಾಡಿದರು.
ಜಾನಪದ ಕಲಾ ಕ್ಷೇತ್ರ ಪ್ರದರ್ಶನ, ಆಹಾರ ಮೇಳ, ಗುಡಿ ಮತ್ತು ಕುಶಲ ಕಲೆಗಾರಿಕೆಗಳ ಮಾರಾಟ ಮಳಿಗೆಗಳನ್ನು ಏರ್ಪಡಿಸಲಾಗಿತ್ತು.
ಸಮಾರಂಭದಲ್ಲಿ ಸರ್ಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿಗಳಾದ ಚಿರಂಜೀವಿ ಸಿಂಗ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ.ಎನ್ .ಮಂಜುಳಾ ಹಾಗೂ ಕಾದಂಬರಿ ಟ್ರಸ್ಟ್ ಸಂಸ್ಥಾಪಕಿ ಚಂದ್ರ ಜೈನ್ ಸೇರಿದಂತೆ ಅನೇಕರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು
ಕರ್ನಾಟಕ ವಾರ್ತೆ
