ಜಲ ಜೀವನ್ ಮಿಷನ್ ಯೋಜನೆಯ ಮೂಲಕ ಮನೆ ಮನೆಗೆ ನಲ್ಲಿ ಮೂಲಕ ನೀರು ಪೂರೈಕೆ
ಕೋಲಾರ / ೨೫ ಅಕ್ಟೋಬರ್ (ಹಿ.ಸ) : ಜಲ ಜೀವನ್ ಮಿಷನ್ ಯೋಜನೆ ಮೂಲಕ ಗ್ರಾಮೀಣ ಪ್ರದೇಶದ ಪ್ರತಿ ಮನೆ ಮನೆಗೆ ನಲ್ಲಿ ಸಂಪರ್ಕದ ಮೂಲಕ ಶುದ್ದ ಕುಡಿಯುವ ನೀರು ಪೂರೈಕೆ ಆಗಲಿದ್ದು, ಈ ಯೋಜನೆ ಸದುಪಯೋಗ ಪಡಿಸಿಕೊಳ್ಳಿ ಎಂದು ಶಾಸಕ ಕೊತ್ತೂರು ಮಂಜುನಾಥ್ ಕರೆ ನೀಡಿದರು.
ಕೋಲಾರ ತಾಲೂಕಿನ ವಕ್ಕಲೇರಿ ಹಾಗೂ ಕಸಬಾ ಹೋಬಳಿಯ ಗ್ರಾಮದಲ್ಲಿ ಬುಧವಾರ ಜಲ ಜೀವನ್ ಮಿಷನ್ ಯೋಜನೆಯ ಪ್ರತಿ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರಿನ ಸಂಪರ್ಕ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಯೋಜನೆಯನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಕೇಂದ್ರ ಸರಕಾರವು ೪೫% ರಾಜ್ಯ ಸರಕಾರ ೪೫% ಅನುದಾನದೊಂದಿಗೆ ಸಾರ್ವಜನಿಕರ ೧೦% ಹಣವನ್ನು ಬಳಸುವಂತೆ ರೂಪಿಸಲಾಗಿತ್ತು ನಂತರ ಸಾರ್ವಜನಿಕರ ಹಣವನ್ನು ಸಹ ರಾಜ್ಯದ ಸಿದ್ದರಾಮಯ್ಯ ಸರಕಾರವು ನೀಡುವ ಮೂಲಕ ಜನರ ಅಭಿವೃದ್ಧಿಗೆ ಬದ್ದವಾಗಿ ಕೆಲಸ ಮಾಡುತ್ತಾ ಇದೆ ಎಂದರು.
ಮಹಾತ್ಮ ಗಾಂಧೀಜಿಯವರ ಕನಸಿನ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯೂ ಒಂದಾಗಿದೆ ಗ್ರಾಮೀಣ ಭಾಗದಲ್ಲಿ ಶುದ್ದ ಕುಡಿಯುವ ನೀರಿನ ಸಮಸ್ಯೆಯಿಂದ ಕಾಯಿಲೆಗಳಿಗೆ, ದೈಹಿಕ ಸಮಸ್ಯೆಗೆ ತುತ್ತಾಗುತ್ತಿದ್ದರು. ಸರ್ಕಾರ ಸಾಕಷ್ಟು ಕಡೆಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಮಾಡಿದರು ಸಹ ಇನ್ನು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದನ್ನು ನೋಡಿತ್ತಿದ್ದೇವೆ. ಅದಕ್ಕಾಗಿ ಗ್ರಾಮೀಣ ಭಾಗದ ಪ್ರತಿ ಮನೆಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡುವ ಮೂಲಕ ಪ್ರತಿಯೊಬ್ಬರ ಆರೋಗ್ಯ ಕಾಪಾಡುವ ಕೆಲಸ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ಗ್ರಾಮೀಣ ಭಾಗದ ಪ್ರತಿ ಮನೆಗೆ ನೀರು ಒದಗಿಸಲಾಗುವುದು ಈ ಯೋಜನೆಯನ್ನು ಮುಂದಿನ ಪೀಳಿಗೆಯ ದೂರದೃಷ್ಟಿಯಿಂದ ಮಾಡಲಾಗಿದೆ ತಾಲೂಕಿನ ಕಸಬಾ ಮತ್ತು ವಕ್ಕಲೇರಿ ಹೋಬಳಿಯ ಸುಮಾರು ೨೧ ಗ್ರಾಮಗಳಲ್ಲಿ ಯೋಜನೆಯನ್ನು ರೂಪಿಸಲಾಗಿದೆ
ಕಾಮಗಾರಿಯನ್ನು ಗುಣಮಟ್ಟದಿಂದ ಮತ್ತು ವೇಗವಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಮುಂದೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಅಭಾವ ತಪ್ಪಿಸಲು ಜನ ಜೀವನ್ ಮಿಷನ್ ಯೋಜನೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಚಿಕ್ಕಹಸಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಜನಮ್ಮ ಚೌಡಪ್ಪ, ಬೆಗ್ಲಿಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಾ ಲೋಕೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಕಾಂಗ್ರೆಸ್ ಮುಖಂಡರಾದ ಗದ್ದೆಕಣ್ಣೂರು ದಯಾನಂದ್, ಚಂಜಿಮಲೆ ರಮೇಶ್, ವಕ್ಕಲೇರಿ ರಾಜಪ್ಪ, ವರದೇನಹಳ್ಳಿ ವೆಂಕಟೇಶ್, ಮೈಲಾಂಡಹಳ್ಳಿ ಮುರಳಿ, ಛತ್ರಕೋಡಿಹಳ್ಳಿ ಮಂಜುನಾಥ್, ಚೋಳಘಟ್ಟ ಸೀನಪ್ಪ, ಎಲ್.ಜಿ ಮುನಿರಾಜು, ನಾರಾಯಣಸ್ವಾಮಿ, ಜನಪನಹಳ್ಳಿ ನವೀನ್, ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಚಿತ್ರ ; ಕೋಲಾರ ತಾಲ್ಲೂಕಿನ ವಕ್ಕಲೇರಿ ಹೋಬಳಿ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಕುಡಿಯುವ ನೀರು ಪೂರೈಕೆ ಯೋಜನೆಗೆ ಶಾಸಕ ಕೊತ್ತೂರು ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿದರು.
