
ಗದಗ, 14 ಡಿಸೆಂಬರ್(ಹಿ.ಸ):
ಆ್ಯಂಕರ್ :
ಗದಗ ಜಿಲ್ಲೆಯಾದ್ಯಂತ ಪಡಿತರ ಅಕ್ಕಿ ಮಾಫಿಯಾ ಪ್ರಭಾವಶಾಲಿಯಾಗಿ ಬೆಳೆದಿದ್ದು, ರಾಜಕೀಯ ಪಕ್ಷಗಳ ನಾಯಕರು, ಅವರ ಮಕ್ಕಳು, ಹಿಂಬಾಲಕರು, ರೌಡಿ ಶೀಟರ್ ಆಗಿರುವವರೇ ಇದರ ಕಿಂಗ್ ಪಿನ್. ಆಹಾರ ಇಲಾಖೆಯಾಗಲಿ, ಪೊಲೀಸ್ ಇಲಾಖೆಯಾಗಲಿ ಇದನ್ನು ತಡೆಗಟ್ಟಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.
ಗದಗ -ಬೆಟಗೇರಿ ಅವಳಿ ನಗರದಲ್ಲಿನ ಬಹುತೇಕರಿಗೆ ಈ ಮಾಫಿಯಾ ಬಗ್ಗೆ ಗೊತ್ತು. ಎಲ್ಲಿ ಸಂಗ್ರಹಣೆಯಾಗುತ್ತದೆ? ಅದು ಅಲ್ಲಿಂದ ಎಲ್ಲಿಗೆ ಸಾಗಾಟವಾಗುತ್ತದೆ. ಯಾವ ಮನೆಗಳಲ್ಲಿ ಸಂಗ್ರಹಿಸಿ, ರಾತ್ರೋರಾತ್ರಿ ಬೇರೆ ಜಿಲ್ಲೆಗಳಿಗೆ ಸಾಗಿಸುತ್ತಾರೆ ಎನ್ನುವ ವಿವರ ಗೊತ್ತು. ಆದರೆ, ಭಯದಿಂದ ಅವರೆಲ್ಲ ಬಹಿರಂಗವಾಗಿ ಹೇಳುವ ಸ್ಥಿತಿಯಲ್ಲಿ ಇಲ್ಲ.ಗದಗ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಅಕ್ಕಿ ದಂಧೆಗೆ ಪಕ್ಕದ ಹುಬ್ಬಳ್ಳಿಗೆ ಹೋಗುತ್ತಿದೆ. ಈಚೆಗೆ ಹುಬ್ಬಳ್ಳಿ ಎಪಿಎಂಸಿಯಲ್ಲಿ ನಡೆದ ದಾಳಿಯಲ್ಲಿ ಪತ್ತೆಯಾದ ಅಕ್ಕಿಗೂ ಗದಗ ಜಿಲ್ಲೆಗೂ ವಿಶೇಷ ನಂಟಿದೆ. ಈ ಬಗ್ಗೆ ಆಹಾರ ಇಲಾಖೆ ತನಿಖೆ ನಡೆಸಬೇಕಿದೆ.ನಗರದಲ್ಲಿ ಇನ್ನೂ ನೂರಾರು ಕುಟುಂಬಗಳು ಪಡಿತರ ವ್ಯವಸ್ಥೆಯಿಂದ ಹೊರಗುಳಿದಿವೆ. ಅವರಿಗೆ ಆಹಾರ ಧಾನ್ಯವೂ ಸಿಗುತ್ತಿಲ್ಲ. ಆಹಾರ ಧಾನ್ಯದ ಬದಲಾಗಿ ಸರ್ಕಾರ ನೀಡುತ್ತಿರುವ ಹಣವೂ ಸಿಗುತ್ತಿಲ್ಲ ಎಂದು ಪ್ರತಿಭಟನೆ ನಡೆಸಿದರೆ, ಇನ್ನೊಂದೆಡೆ ಬಡವರಿಗೆ ಸರ್ಕಾರ ನೀಡುತ್ತಿರುವ ಅಕ್ಕಿ ಮಾತ್ರ ನಿರಂತರವಾಗಿ ಪ್ರಭಾವಿಗಳ ಬಳಿ ಸಂಗ್ರಹವಾಗಿ ಅಲ್ಲಿಂದ ಬೇರೆಡೆ ರವಾನೆಯಾಗುತ್ತಿದೆ. ಇದು ನೂರಾರು ಬಡ ಕುಟುಂಬಗಳಿಗೆ ಆಗುತ್ತಿರುವ ಅನ್ಯಾಯವಾಗಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳೇ ಗಮನ ಹರಿಸಬೇಕಿದೆ.
ಹಿಂದೂಸ್ತಾನ್ ಸಮಾಚಾರ್
