ಬಳ್ಳಾರಿ,, 6 ನವೆಂಬರ್ (ಹಿ.ಸ):
ಆ್ಯಂಕರ್: ಕರ್ನಾಟಕದಲ್ಲಿರುವ ಬರದ ಭೀಕರತೆ ಮತ್ತು ನಷ್ಟದ ಪ್ರಮಾಣದ ನಿಖರವಾದ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಇನ್ನೂ ಸಲ್ಲಿಸಿಲ್ಲ ಮತ್ತು ಬರ ಪರಿಹಾರಕ್ಕಾಗಿ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಮೊತ್ತದ ಸ್ಪಷ್ಟತೆಯನ್ನು ಕೇಂದ್ರಕ್ಕೆ ಇನ್ನ್ಕೂ ತಿಳಿಸಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸ್ ಮತ್ತು ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಎಲ್ಲರೂ ಕೇಂದ್ರ ಸರ್ಕಾರ ಬರ ಪರಿಹಾರ ಘೋಷಣೆ ಮಾಡಿಲ್ಲ, ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ ಎಂದೆಲ್ಲಾ ಆರೋಪ ಮಾಡುತ್ತಿದ್ದಾರೆ. ವಾಸ್ತವಲ್ಲಿ, ಈವರೆಗೂ ರಾಜ್ಯದ ಬರ ಮತ್ತು ಬರದ ನಷ್ಟದ ಸ್ಪಷ್ಟ ವರದಿಯನ್ನು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಲ್ಲಿಸಿಲ್ಲ. ರಾಜ್ಯ ಸರ್ಕಾರ ಬರ ಪರಿಹಾರವನ್ನು ಘೋಷಣೆ ಮಾಡದ ನಂತರವೇ ಕೇಂದ್ರ ಸರ್ಕಾರ ಬರ ಪರಿಹಾರ ಘೋಷಣೆ ಮಾಡಲಿದೆ ಎಂದರು.
ಮುಖ್ಯಮಂತ್ರಿಗಳು ಹೇಳಿದ ನಂತರವೂ ಅವರ ಸಚಿವ ಸಂಪುಟದ ಸದಸ್ಯರು ಜಿಲ್ಲಾ ಮಟ್ಟದಲ್ಲಿ ಬರ ಅಧ್ಯಯನ ಪ್ರವಾಸ ಮಾಡುತ್ತಿಲ್ಲ. ಕಾಂಗ್ರೆಸ್ನಲ್ಲಿರುವ ಸಂಘರ್ಷಗಳ ಕುರಿತೇ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಕ್ಷದ ವರಿಷ್ಟರಾದ ಸಿ. ವೇಣುಗೋಪಾಲ್ ಮತ್ತು ಸುರ್ಜಿವಾಲಾ ಅವರಿಗೆ ಕರ್ನಾಟಕ ಕಾಂಗ್ರೆಸ್ ಮೇಲೆ ಹಿಡಿತ ತಪ್ಪಿದೆ. ಯಾವ ಶಾಸಕರೂ ಈ ಮುಖಂಡರ ಮಾತುಗಳನ್ನು ಕೇಳುತ್ತಿಲ್ಲ. ದಿನಕ್ಕೊಬ್ಬರು, ಕ್ಷಣಕ್ಕೊಂದರಂತೆ `ಮುಖ್ಯಮಂತ್ರಿ, ಹೆಚ್ಚುವರಿ ಉಪಮುಖ್ಯಮಂತ್ರಿ’ ಕುರಿತು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಒಳಜಗಳ ಹಾದಿಬೀದಿಗೆ ಬಂದಿದೆ ಎಂದು ವ್ಯಂಗ್ಯವಾಡಿದರು.
`ನಾನು ದಡ್ಡ ನಿಜ, ಸುಳ್ಳುಗಾರನಲ್ಲ’
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದಂತೆ ನಾನು ದಡ್ಡ ನಿಜ. ಆದರೆ, ಅವರಂತೆ ಸುಳ್ಳುಗಾರನಲ್ಲ. ಜನಗಣತಿ ವಿಚಾರದಲ್ಲಿ ಸಾರ್ವಜನಿಕರ 160 ಕೋಟಿ ರುಪಾಯಿಗಳನ್ನು ಪೋಲು ಮಾಡಿದ್ದಾರೆ. ಜಾತಿಗಣತಿ ಕುರಿತು ಕಾಂತರಾಜು ಅವರ ವರದಿಯ ಮೂಲಪ್ರತಿಯೇ ಸರ್ಕಾರದಲ್ಲಿಲ್ಲ. ಅಲ್ಲದೇ, ಈ ವರದಿಗೆ ಈ ವರೆಗೂ ಕಾರ್ಯದರ್ಶಿಗಳ ಸಹಿ ಇಲ್ಲ. ಅಧಿಕಾರಕ್ಕಾಗಿ ಜಾತಿಗಣತಿ ವಿಚಾರವನ್ನು ರಾಜಕೀಯಗೊಳಿಸುತ್ತಿದ್ದಾರೆ. ಹಿಂದುಳಿದ ಮತ್ತು ದಲಿತರನ್ನು ವಂಚಿಸಲಿಕ್ಕಾಗಿ ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಉದ್ದೇಶಪೂರ್ವಕವಾಗಿ ಮೋಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
`ಅರೆಸ್ಟ್ ಮಾಡಿ, ರುಬ್ಬಿ’
ಡಿ.ಕೆ. ಶಿವಕುಮಾರ್ ಪರವಾಗಿ ಬಿಬಿಎಂಪಿಯ ಅಧಿಕಾರಿ ಪ್ರಹ್ಲಾದ್ ಅವರು ಗುತ್ತಿಗೆದಾರರಿಂದ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಈ ಕುರಿತು ಹಾಲಿ ನ್ಯಾಯಾಧೀಶರು ಅಥವಾ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ನಡೆಸಲಿ. ಇಲ್ಲವಾದಲ್ಲಿ ಅಧಿಕಾರಿ ಪ್ರಹ್ಲಾದ್ ಮತ್ತು ಕೆಂಪಣ್ಣ ಅವರ ವಿರುದ್ಧ ದೂರು ದಾಖಲಿಸಿ, ಕೋಣೆಯಲ್ಲಿ ಹಾಕಿ ಚೆನ್ನಾಗಿ ರುಬ್ಬಿದಲ್ಲಿ ಸತ್ಯ ಏನು ಅಂತ ಬಯಲಿಗೆ ಬರಲಿದೆ ಎಂದು ಹೇಳಿದರು.
ಮಾಜಿ ಶಾಸಕ ಬಸವರಾಜ ದಡೇಸೂಗೂರು ಅವರು ಮಾತನಾಡಿ, ರೈತರು ಮತ್ತು ಭತ್ತ, ಮೆಣಸಿನಕಾಯಿ, ಮೆಕ್ಕೆಜೋಳ ಬೆಳೆಯನ್ನು ರಕ್ಷಿಸಲು ತುಂಗಭದ್ರ ಜಲಾಶಯದಲ್ಲಿ ಡೆಡ್ಸ್ಟೋರೇಜ್ ಹೊರತಾಗಿಯೂ 5 ಟಿಎಂಸಿ ನೀರನ್ನು ಬಳಸಿಕೊಳ್ಳಲು ಅವಕಾಶವಿದೆ. ಜಲಮಂಡಲಿ ಮತ್ತು ಸರ್ಕಾರ ಆಸಕ್ತಿ ತೋರಿಸಬೇಕು. ಜಿಂದಾಲ್ ಸೇರಿ ಎಲ್ಲಾ ಕೈಗಾರಿಕೆಗಳ ನೀರಿನ ಕೋಟಾವನ್ನು ತಡೆದು ಬೆಳೆಗಳಿಗೆ ಪೂರೈಸಿ ರೈತರನ್ನು ಮತ್ತು ಕೃಷಿಯನ್ನು ಸರ್ಕಾರ ಉಳಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ, ಮುಖಂಡರಾದ ಗುತ್ತಿಗನೂರು ವಿರೂಪಾಕ್ಷಗೌಡ, ಕೆ.ಎ. ರಾಮಲಿಂಗಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ. ಮುರಹರಗೌಡ, ಅನಿಲ್ ನಾಯ್ಡು ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಭೇಟಿ, ಪರಿಶೀಲನೆ
ಬಿಜೆಪಿ ಕರ್ನಾಟಕಾದ್ಯಂತ ನಡೆಸುತ್ತಿರುವ ಬರ ಅಧ್ಯಯನ ತಂಡವು ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ಬಳ್ಳಾರಿ ತಾಲೂಕಿನ ಚೆಳ್ಳಗುರ್ಕಿ, ಕೆ. ವೀರಾಪುರ ಇನ್ನಿತರೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಆದರೆ, ಭಾನುವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಲ್ಲಿಯೂ ತಂಡದ ಸದಸ್ಯರು ಪರಿಶೀಲನೆ ನಡೆಸಿತು. ಮಾಜಿ ಶಾಸಕರಾದ ಎಂ.ಎಸ್. ಸೋಮಲಿಂಗಪ್ಪ, ಬಸವರಾಜ್ ದಡೇಸೂಗೂರು, ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಗೌಡ, ಮುಖಂಡರಾದ ಕೆ.ಎ. ರಾಮಲಿಂಗಪ್ಪ, ಬಿಜೆಪಿ ಉಪಾಧ್ಯಕ್ಷ ಬಿ. ಓಬಳೇಶ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರಕಾಶಗೌಡ, ಜಿಲ್ಲಾ ಉಪಾಧ್ಯಕ್ಷ ಗಾಳಿ ಶಂಕ್ರಪ್ಪ ಇನ್ನಿತರರು ಉಪಸ್ಥಿತರಿದ್ದರು.
