ಧಾರವಾಡ,28ಅಕ್ಟೋಬರ್ (ಹಿ.ಸ):
ಆ್ಯಂಕರ್ :
ಆದಿಕವಿ ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ ಇಡೀ ರಾಷ್ಟ್ರಕ್ಕೆ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದ್ದು, ಈ ಮಹಾನ್ ಜ್ಞಾನಿಯನ್ನು ಸಮಾಜ ಸದಾಕಾಲ ಸ್ಮರಿಸಬೇಕೆಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಧಾರವಾಡದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಾಲ್ಮೀಕಿ ಮಹರ್ಷಿಗಳ ಜಯಂತಿ ಎಂದರೆ ಅದು ರಾಮಾಯಾಣ ಮಹಾಕಾವ್ಯದ ಸ್ಮರಣೆ. 24 ಸಾವಿರ ಶ್ಲೋಕದ ರಾಮಾಯಾಣವು ಇಡೀ ರಾಷ್ಟ್ರಕ್ಕೆ ಅತೀ ದೊಡ್ಡ ಅತ್ಯಮೂಲ್ಯ ಸಂಪತ್ತು. ಈ ಮಹಾಕಾವ್ಯ ಬರೆದ ವಾಲ್ಮೀಕಿಯನ್ನು ಬ್ರಿಟಿಷರು ಮಹಾನ್ ಜ್ಞಾನಿಯೆಂದು ಕರೆದಿದ್ದಾರೆ ಎಂದು ಸಚಿವರು ಸ್ಮರಿಸಿದರು.
ಮಹರ್ಷಿ ವಾಲ್ಮೀಕಿಯವರು ಕೇವಲ ವಾಲ್ಮೀಕಿ ಸಮಾಜಕ್ಕೆ ಮಾತ್ರವಲ್ಲದೇ ಇಡೀ ದೇಶಕ್ಕೆ ಮಹಾಗುರು ಆಗಿದ್ದಾರೆ. ಅದೇ ರೀತಿ ಡಾ.ಅಂಬೇಡ್ಕರ್ ಅವರು ಪರಿಶಿಷ್ಟ ಸಮುದಾಯಗಳಿಗೆ ಮಾತ್ರ ನಾಯಕರಲ್ಲದೇ ಇಡೀ ಭಾರತಕ್ಕೆ ಮಹಾನ್ ನಾಯಕರು. ʻದಯವೇ ಧರ್ಮದ ಮೂಲವಯ್ಯʼಯೆಂದು ಸಾರಿದ ಬಸವಣ್ಣನವರ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ. ಸಮಾಜದಲ್ಲಿ ಪರಸ್ಪರರನ್ನು ಪ್ರೀತಿಸಬೇಕಿದೆ. ಈ ಎಲ್ಲ ನಾಯಕರ ಆದರ್ಶಗಳನ್ನು ಇಂದಿನ ಯುವಪೀಳಿಗೆ ಪಾಲಿಸಬೇಕಾದ ಅಗತ್ಯವಿದೆ ಎಂದರು.
ಆರಂಭದಲ್ಲಿ ಸಚಿವರು, ವಾಲ್ಮೀಕಿ, ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದರು. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಾಲ್ಮೀಕಿ ಅಭಿವೃದ್ಧಿ ಮಂಡಳಿಯಿಂದ ಫಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಿಸಲಾಯಿತು.
ಮನಗುಂಡಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ರಂಗನಾಥ ಮಹರ್ಷಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ವಾಲ್ಮೀಕಿ ಸಮುದಾಯದ ಮುಖಂಡರಾದ ಲೋಹಿತ ನಾಯಕರ, ಮೋಹನ ಗುಡಸಲಮನಿ ಶಾಂತಕಾ ಗುಜ್ಜಳ, ಸುರೇಶಭಾಬು ತಳವಾರ, ಲಕ್ಮಣ ಬಕ್ಕಾಯಿ, ಡಾ. ಕಲ್ಮೇಶ ಹಾವೇರಿಪೆಟ, ಮಾರುತಿ ಬಿಳಗಿ, ಡಾ. ತ್ಯಾಗರಾಜ, ಮಂಜುನಾಥ ವಾಲಿಕಾರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್
