ಉತ್ತರಕಾಶಿ, 23 ನವೆಂಬರ್ (ಹಿ.ಸ):
ಆ್ಯಂಕರ್ :
ಉತ್ತರಕಾಶಿಯ ಸಿಲ್ಕ್ ಯಾರಾ ಸುರಂಗದಲ್ಲಿ ಸಿಕ್ಕಿಬಿದ್ದಿರುವ ಕಾರ್ಮಿಕರ ರಕ್ಷಣಾ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ. ಸಿಕ್ಕಿಬಿದ್ದಿರುವ ೪೧ ಕಾರ್ಮಿಕರನ್ನು ಇಂದು ಬೆಳಗ್ಗೆ ರಕ್ಷಣಾ ಸಿಬ್ಬಂದಿ ತಲುಪಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಸಿಲ್ಕ್ ಯಾರಾ ದಿಂದ ಬಾರ್ಕೋಟ್ಗೆ ಸುರಂಗದ ಸಿಲ್ಕ್ ಯಾರಾ ಭಾಗದ ೬೦ ಮೀಟರ್ ವ್ಯಾಪ್ತಿಯಲ್ಲಿ ಕಲ್ಲು ಮಣ್ಣು ಕುಸಿದು ಬಿದ್ದಿದ್ದರಿಂದ ಇದರಲ್ಲಿ ನವೆಂಬರ್ ೧೨ ರಿಂದ ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಈಗಾಗಲೇ ರಕ್ಷಣಾ ಸಿಬ್ಬಂದಿ ಅಡ್ಡಲಾಗಿ ಕೊರೆಯುವ ಮೂಲಕ ೪೪ ಮೀಟರ್ ಪೈಪ್ಗಳನ್ನು ಸೇರಿಸಿದ್ದಾರೆ. ಆದಾಗ್ಯೂ, ಅವಶೇಷಗಳಲ್ಲಿ ಕೆಲವು ಸ್ಟೀಲ್ ರಾಡ್ ಗಳು ಕಂಡುಬಂದಿದ್ದು, ಯಂತ್ರವು ಆ ರಾಡ್ಗಳನ್ನು ಕತ್ತರಿಸಲು ಸಾಧ್ಯವಾಗಿಲ್ಲ. ಆದ್ದರಿಂದ, ಎನ್ಡಿಆರ್ಎಫ್ ಸಿಬ್ಬಂದಿ ಆ ರಾಡ್ಗಳನ್ನು ಕತ್ತರಿಸುತ್ತಾರೆ, ನಂತರ ಮತ್ತೆ ಯಂತ್ರವನ್ನು ಬಳಸಲಾಗುವುದು ಎಂದು ಕಾಶ್ಮೀರದಲ್ಲಿ ನಿರ್ಮಾಣ ಹಂತದಲ್ಲಿರುವ ಜೊಜಿ-ಲಾ ಸುರಂಗ ಯೋಜನೆಯ ಯೋಜನಾ ಮುಖ್ಯಸ್ಥರೂ ಆಗಿರುವ ರಕ್ಷಣಾ ಸಿಬ್ಬಂದಿ ಅಧಿಕಾರಿ ಹರ್ಪಾಲ್ ಸಿಂಗ್ ಹೇಳಿದ್ದಾರೆ. ಇಂದು ಸಂಜೆ ವೇಳೆಗೆ ರಕ್ಷಕರು ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪಲು ಸಾಧ್ಯವಾಗುವುದು ಎಂದು ಅವರು ಆಶಿಸಿದ್ದಾರೆ. ನಿನ್ನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಸುರಂಗವನ್ನು ಪ್ರವೇಶಿಸಿರುವುದಾಗಿ ಉತ್ತರಾಖಂಡ ಮುಖ್ಯಮಂತ್ರಿ ಕಚೇರಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಸುರಂಗದೊಳಗೆ ಆಂಬ್ಯುಲೆನ್ಸ್ ಸಹ ನಿಯೋಜಿಸಲಾಗಿದೆ ಮತ್ತು ಕಾರ್ಮಿಕರ ಆರೋಗ್ಯ ತಪಾಸಣೆಗಾಗಿ ವೈದ್ಯರ ತಂಡವನ್ನು ಸಹ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್
