ದೆಹಲಿ, 19 ಜನವರಿ(ಹಿ.ಸ):
ಆ್ಯಂಕರ್ :
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಅವರು ತಮ್ಮ ಮಹಾರಾಷ್ಟ್ರ ಭೇಟಿಯ ವೇಳೆ ಅಂದಾಜು ಎರಡು ಸಾವಿರ ಕೋಟಿ ರೂಪಾಯಿ ಮೊತ್ತದ ಎಂಟು ಅಟಲ್ ಮಿಷನ್ ಪುನರುಜ್ಜೀವನ ಮತ್ತು ನಗರ ಪರಿವರ್ತನೆ ಅಮೃತ್ ಯೋಜನೆಗಳ ಕಾಮಗಾರಿಗೆ ಅಡಿಗಲ್ಲು ಹಾಕಲಿದ್ದಾರೆ.
ಬಳಿಕ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ೯೦ ಸಾವಿರ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಿದ್ದಾರೆ. ಮಧ್ಯಾಹ್ನ ಪ್ರಧಾನಿ ಅವರು, ಕರ್ನಾಟಕಕ್ಕೆ ಭೇಟಿ ನೀಡಿ ಬೆಂಗಳೂರಿನಲ್ಲಿ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕೇಂದ್ರದ ಉದ್ಘಾಟನೆ ಮತ್ತು ಬೋಯಿಂಗ್ ಸುಕನ್ಯಾ ಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅಭಿವೃದ್ಧಿ ಹೊಂದುತ್ತಿರುವ ವಿಮಾನಯಾನ ಕ್ಷೇತ್ರದಲ್ಲಿ ದೇಶಾದ್ಯಂತದ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಈ ಸುಕನ್ಯಾ ಯೋಜನೆಯ ಉದ್ದೇಶವಾಗಿದೆ.
ಸಂಜೆ ತಮಿಳುನಾಡಿಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿಯವರು ಚೆನ್ನೈನಲ್ಲಿ ಆಯೋಜಿಸಿರುವ ೨೦೨೩ರ ಖೇಲೋ ಇಂಡಿಯಾ ಯುವಕ್ರೀಡೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಖೇಲೋ ಇಂಡಿಯಾ ಯುವಕ್ರೀಡೋತ್ಸವ ದಕ್ಷಿಣ ಭಾರತದಲ್ಲಿ ನಡೆಯುತ್ತಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ತಮಿಳುನಾಡಿನಲ್ಲಿ, ಸುಮಾರು ೨೫೦ ಕೋಟಿ ರೂಪಾಯಿ ವೆಚ್ಚದ ಪ್ರಸಾರ ಕೇಂದ್ರಗಳಿಗೆ ಚಾಲನೆ ನೀಡಲಿದ್ದಾರೆ. ೮ ರಾಜ್ಯಗಳಲ್ಲಿನ ೧೨ ಎಫ್ಎಂ ಕೇಂದ್ರಗಳು ಹಾಗೂ ದೂರದರ್ಶನದ ೪ ಟ್ರಾನ್ಸ್ ಮೀಟರ್ ಕೇಂದ್ರಗಳ ನಿರ್ಮಾಣಕ್ಕೂ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಇದರಲ್ಲಿ ಕರ್ನಾಟಕದ ಶಿವಮೊಗ್ಗ, ಉಡುಪಿ ವಾಹಿನಿ ಕೇಂದ್ರಗಳು ಸೇರಿವೆ.
ಹಿಂದೂಸ್ತಾನ್ ಸಮಾಚಾರ್
