ಪೂರ್ವ ಚಂಪಾರಣ್, 19ಅಕ್ಟೋಬರ್ :
ಆ್ಯಂಕರ್ :
ಬಿಹಾರ ಪ್ರವಾಸದ ಎರಡನೇ ದಿನ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿಯಲ್ಲಿ ಮಹಾತ್ಮಾ ಗಾಂಧಿ ಕೇಂದ್ರೀಯ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ವಿಶ್ವವಿದ್ಯಾನಿಲಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಪದವಿ ಮತ್ತು ಪದಕಗಳನ್ನು ನೀಡಲಿದ್ದಾರೆ. ೮೮೭ ವಿದ್ಯಾರ್ಥಿಗಳು ಕಳೆದ ಶೈಕ್ಷಣಿಕ ವರ್ಷಗಳಲ್ಲಿ ಸಂಸ್ಥೆಯಿಂದ ಪದವಿ ಮತ್ತು ಪದಕಗಳನ್ನು ಪಡೆಯಲಿದ್ದಾರೆ. ನಂತರ ರಾಷ್ಟ್ರಪತಿಗಳು ಪಾಟ್ನಾಗೆ ಹಿಂದಿರುಗಲಿದ್ದಾರೆ ಮತ್ತು ಸಂಜೆ ಏಮ್ಸ್ ಪಾಟ್ನಾದ ಮೊದಲ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ. ಬಳಿಕ ದ್ರೌಪದಿ ಮುರ್ಮು ಅವರು ಪಾಟ್ನಾದ ರಾಜಭವನದಲ್ಲಿ ದುರ್ಬಲ ಬುಡಕಟ್ಟು ಗುಂಪುಗಳ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ. ಬಿಹಾರ ಭೇಟಿಯ ಕೊನೆಯ ದಿನವಾದ ನಾಳೆ ರಾಷ್ಟ್ರಪತಿ ಗಯಾದಲ್ಲಿ ದಕ್ಷಿಣ ಬಿಹಾರ ಕೇಂದ್ರೀಯ ವಿಶ್ವವಿದ್ಯಾಲಯದ ೩ನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ಬೋಧಗಯಾದ ವಿಶ್ವವಿಖ್ಯಾತ ಮಹಾಬೋಧಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
