ನವದಹೆಲಿ, 10 ಫೆಬ್ರವರಿ :
ನವದೆಹಲಿಯ ಮೇಜರ್ ಧ್ಯಾನ್ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ರಾಷ್ಟ್ರೀಯ ವಾರ್ಷಿಕ ಬುಡಕಟ್ಟು ಉತ್ಸವವಾದ ಆದಿ ಮಹೋತ್ಸವ-೨೦೨೪ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಲಿದ್ದಾರೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಕೂಡ ಉಪಸ್ಥಿತರಿರುವರು. ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಸಹಯೋಗದಲ್ಲಿ ಈ ಮಹೋತ್ಸವವನ್ನು ಆಯೋಜಿಸಲಾಗಿದ್ದು, ಈ ತಿಂಗಳ ೧೮ರ ವರೆಗೆ ನಡೆಯಲಿರುವ ಈ ಉತ್ಸವದಲ್ಲಿ ಭಾರತದ ಬುಡಕಟ್ಟು ಪರಂಪರೆಯ ಶ್ರೀಮಂತ ವೈವಿಧ್ಯತೆಯನ್ನು ಪ್ರದರ್ಶಿಸಲಾಗುತ್ತದೆ. ಈ ಮಹೋತ್ಸವದಲ್ಲಿ ೩೦೦ಕ್ಕೂ ಅಧಿಕ ಮಳಿಗೆಗಳು ಇರಲಿವೆ. ಬುಡಕಟ್ಟು ಕಲೆ ಕರಕುಶಲ ವಸ್ತುಗಳು, ನೈಸರ್ಗಿಕ ಉತ್ಪನ್ನಗಳು, ಬುಡಕಟ್ಟು ಸಮುದಾಯದ ಪರಂಪರೆ ಇಲ್ಲಿ ಅನಾವರಣಗೊಳ್ಳಲಿದೆ ಎಂದು ಬುಡಕಟ್ಟು ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಇದಲ್ಲದೆ ಒಂದು ಸಾವಿರಕ್ಕೂ ಹೆಚ್ಚು ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಬುಡಕಟ್ಟು ಜನರ ಬಗೆ ಬಗೆಯ ಖಾದ್ಯಗಳ ಪ್ರತ್ಯೇಕ ಆಹಾರದ ಮಳಿಗೆಗಳನ್ನು ಕೂಡ ಇಲ್ಲಿರಲಿವೆ. ಈ ಮಹೋತ್ಸವ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಬೆಳಗ್ಗೆ ೧೧ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ ಭೇಟಿ ನೀಡಬಹುದು ಎಂದು ಸಚಿವಾಲಯ ತಿಳಿಸಿದೆ.
