ಪೂರ್ವ ಚಂಪಾರಣ್,19ಅಕ್ಟೋಬರ್ :
ಆ್ಯಂಕರ್ :ಬಿಹಾರ ಪ್ರವಾಸದ ಎರಡನೇ ದಿನ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿಯಲ್ಲಿ ಮಹಾತ್ಮಾ ಗಾಂಧಿ ಕೇಂದ್ರೀಯ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವದಲ್ಲಿ ಭಾಗವಹಿಸಿದ್ದಾರೆ. ವಿಶ್ವವಿದ್ಯಾನಿಲಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಪದವಿ ಮತ್ತು ಪದಕಗಳನ್ನು ನೀಡಿ ಗೌರವಿಸಿದರು.
ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಾತ್ಮಾಗಾಂಧಿಯವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಜಾಗತಿಕ ಮಟ್ಟದಲ್ಲೂ ಗಾಂಧೀಜಿಯವರನ್ನು ಸದಾ ಗೌರವಯುತವಾಗಿ ಸ್ಮರಿಸಲಾಗುತ್ತದೆ ಎಂದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮಾಗಾಂಧಿಯವರ ಕೊಡುಗೆಯನ್ನು ಸ್ಮರಿಸಿದ ರಾಷ್ಟ್ರಪತಿ, ಸತ್ಯಾಗ್ರಹ ಗಾಂಧೀಜಿಯವರ ಪ್ರಬಲ ಅಸ್ತ್ರವಾಗಿತ್ತು, ಚಂಪಾರಣ್ಯದಲ್ಲಿ ಗಾಂಧೀಜಿಯವರು ನಡೆಸಿದ ಹೋರಾಟದಿಂದಾಗಿ ರೈತರ ಮೇಲಿದ್ದ ಹಲವು ಕಠಿಣ ನಿಯಮಗಳು ದೂರವಾಗುವಂತಾಯಿತು. ಒಂದೇ ಕೆಲಸ ನಿರ್ವಹಿಸುವವರೆಲ್ಲಾ ಒಂದೇ ಜಾತಿ ಎಂದು ಗಾಂಧೀಜಿ ಪ್ರತಿಪಾದಿಸಿದ್ದರು ಎಂದರು.
ರಾಷ್ಟ್ರಪತಿ ಸಂಜೆ ಏಮ್ಸ್ ಪಾಟ್ನಾದ ಮೊದಲ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಅವರು ಪಾಟ್ನಾದ ರಾಜಭವನದಲ್ಲಿ ದುರ್ಬಲ ಬುಡಕಟ್ಟು ಗುಂಪುಗಳ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ.
ಬಿಹಾರ ಭೇಟಿಯ ಕೊನೆಯ ದಿನವಾದ ನಾಳೆ ರಾಷ್ಟ್ರಪತಿ ಗಯಾದಲ್ಲಿ ದಕ್ಷಿಣ ಬಿಹಾರ ಕೇಂದ್ರೀಯ ವಿಶ್ವವಿದ್ಯಾಲಯದ ೩ನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ, ಬೋಧಗಯಾದ ವಿಶ್ವವಿಖ್ಯಾತ ಮಹಾಬೋಧಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
