ನವದೆಹಲಿ, 20ಅಕ್ಟೋಬರ್ :
ಆ್ಯಂಕರ್ :ಪ್ರಧಾನಿ ನರೇಂದ್ರ ಮೋದಿ ಇಂದು (ಅಕ್ಟೋಬರ್ 20) ಭಾರತ ದೇಶದ ಮೊದಲ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯನ್ನು (ಆರ್ಆರ್ಟಿಎಸ್) ಉದ್ಘಾಟಿಸಲಿದ್ದಾರೆ. ದೆಹಲಿ-ಗಾಜಿಯಾಬಾದ್-ಮೀರತ್ ಕಾರಿಡಾರ್ನ 17 ಕಿಲೋಮೀಟರ್ ಉದ್ದದ ರೈಲು ಸೇವೆಯ ಮೊದಲ ಹಂತ ಸಿದ್ಧವಾಗಿದ್ದು, ಈ ರೈಲಿಗೆ ‘ನಮೋ ಭಾರತ್’ ಎಂದು ಹೆಸರಿಡಲಾಗಿದೆ. 30,274 ಕೋಟಿ ರೂ. ವೆಚ್ಚದಲ್ಲಿ ಆರಂಭವಾಗಿರುವ ಈ ಯೋಜನೆಯ ಕಾರಿಡಾರ್ 82 ಕಿಲೋಮೀಟರ್ ಉದ್ದವಿದ್ದು, ದೆಹಲಿಯ ಸರಾಯ್ ಕಾಲೇ ಖಾನ್ ನಿಲ್ದಾಣದಿಂದ ಮೀರತ್ನ ಮೋದಿಪುರಂವರೆಗೆ ವಿಸ್ತರಿಸಲಿದೆ. ಮೇಲ್ ಎಕ್ಸ್ಪ್ರೆಸ್ ರೈಲಿನಲ್ಲಿ ಈ ಮಾರ್ಗಕ್ಕೆ ಒಂದೂವರೆ ಗಂಟೆ ಮತ್ತು ಮೀರತ್ ಮತ್ತು ದೆಹಲಿ ನಡುವೆ ಸ್ಥಳೀಯ ರೈಲಿನಲ್ಲಿ 2 ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ. ಆದರೆ, ರಾಪಿಡ್ ಎಕ್ಸ್ ರೈಲು ಕೇವಲ 55-60 ನಿಮಿಷಗಳಲ್ಲಿ ದೆಹಲಿಯಿಂದ ಮೀರತ್ ಗೆ ತಲುಪುತ್ತದೆ.
ಮೊದಲ ಹಂತದಲ್ಲಿ ಈ ರಾಪಿಡ್ ರೈಲು ಸಾಹಿಬಾಬಾದ್, ಗಾಜಿಯಾಬಾದ್ ಗುಲ್ಧರ್, ದುಹೈ ಮತ್ತು ದುಹೈ ಡಿಪೋ ಸೇರಿದಂತೆ 5 ನಿಲ್ದಾಣಗಳ ನಡುವೆ ಸಂಚರಿಸಲಿದೆ. ಎನ್ಸಿಆರ್ನಲ್ಲಿ ಒಟ್ಟು 8 ಆರ್ಆರ್ಟಿಎಸ್ ಕಾರಿಡಾರ್ಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ದೆಹಲಿ-ಗಾಜಿಯಾಬಾದ್-ಮೀರತ್ ಕಾರಿಡಾರ್ಗೆ ಪ್ರಧಾನ ಮಂತ್ರಿ ಮೋದಿ 2019ರ ಮಾರ್ಚ್ 8ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.
