ನವದೆಹಲಿ, 19 ಆಗಸ್ಟ್ (ಹಿ.ಸ.):
ಆ್ಯಂಕರ್:
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ಪರಿಷ್ಕರಣೆ ವಿರುದ್ಧ ವಿರೋಧ ಪಕ್ಷದ ಇಂಡಿ ಮೈತ್ರಿಕೂಟದ ಸಂಸದರು ಇಂದು ಸಂಸತ್ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹಾಗೂ ಅವಧೇಶ್ ಪ್ರಸಾದ್ ಸಿಂಗ್ ಸೇರಿದಂತೆ ಅನೇಕ ಹಿರಿಯ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಚುನಾವಣಾ ಆಯೋಗವನ್ನು ತೀವ್ರವಾಗಿ ಟೀಕಿಸಿದರು. ಚುನಾವಣಾ ಆಯೋಗವು ವಿರೋಧ ಪಕ್ಷದ ನಾಯಕರನ್ನು ಬೆದರಿಸಲು ಪ್ರಯತ್ನಿಸುತ್ತಿದೆ, ಇದು ಅದರ ಅಧಿಕಾರ ವ್ಯಾಪ್ತಿಯನ್ನು ಮೀರಿದ ಕೆಲಸ. ಸಾಂವಿಧಾನಿಕ ಜವಾಬ್ದಾರಿಗಳಿಂದ ಓಡಿಹೋಗುವಂತಿಲ್ಲ, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಮುಕ್ತ ಮತ್ತು ನ್ಯಾಯಯುತ ಚುನಾವಣೆ ಕುರಿತು ಗಂಭೀರ ಶಂಕೆಗಳು ಎದ್ದಿರುವುದನ್ನು ಖರ್ಗೆ ಉಲ್ಲೇಖಿಸಿ, ಪ್ರತಿಪಕ್ಷಗಳನ್ನು ಬೆದರಿಸುವ ಬದಲು ಸತ್ಯಾಂಶಗಳನ್ನು ತನಿಖೆ ಮಾಡಬೇಕು. ಇದು ಕೇವಲ ರಾಜಕೀಯ ಚಳುವಳಿ ಅಲ್ಲ ಮತದಾನದ ಹಕ್ಕು ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟ, ಈ ಹೋರಾಟ ಬೀದಿಗಳಿಂದ ಸಂಸತ್ತಿನವರೆಗೂ ಮುಂದುವರಿಯುತ್ತದೆ ಎಂದು ಹೇಳಿದರು.
—————
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
