
ಚೆಂಗಲ್ ಪೇಟ್, 27ಅಕ್ಟೋಬರ್ (ಹಿ.ಸ):
ಆ್ಯಂಕರ್ :
ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚೆಂಗಲ್ ಪೇಟ್ ಜಿಲ್ಲೆಯ ಉತ್ತಂಡಿಯಲ್ಲಿ ಭಾರತೀಯ ಸಾಗರ ವಿಶ್ವವಿದ್ಯಾಲಯದ ಎಂಟನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಂಗಳೂರು ಐಐಎಂ ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಪ್ರತಿಷ್ಠಾನ ಸಪ್ತಾಹಕ್ಕೆ ನಿನ್ನೆ ಚಾಲನೆ ನೀಡಿ ಮಾತನಾಡಿದ ರಾಷ್ಟ್ರಪತಿ, ಜಗತ್ತಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾಜಿಕ ಕಳಕಳಿ ಹಾಗೂ ನೈತಿಕ ಹೊಣೆಗಾರಿಕೆಯಂತಹ ಮಹತ್ವದ ವಿಷಯಗಳನ್ನೂ ಸಹ ವಿದ್ಯಾರ್ಥಿಗಳಿಗೆ ಇತರ ಪಾಠಗಳಂತೆ ಬೋಧಿಸಲಾಗುತ್ತದೆ ಎಂದರು.
ಕಳೆದ ೫೦ ವರ್ಷಗಳಿಂದ ಬೆಂಗಳೂರಿನ ಪ್ರತಿಷ್ಠಿತ ಐಐಎಂ, ವ್ಯವಸ್ಥಾಪಕ ಪ್ರತಿಭೆಗಳು ಮತ್ತು ಸಂಪನ್ಮೂಲಗಳನ್ನು ಉತ್ತೇಜಿಸುತ್ತಿದೆ. ಸಂಸ್ಥೆಯು ಕೇವಲ ವ್ಯವಸ್ಥಾಪಕರನ್ನು ಸೃಷ್ಟಿಸಿರುವುದಲ್ಲದೆ, ಸಂಶೋಧಕರು, ಉದ್ಯಮಶೀಲರನ್ನು ರಾಷ್ಟ್ರಕ್ಕೆ ನೀಡಿದೆ. ವೃತ್ತಿಪರತೆ ಮತ್ತು ಕಾರ್ಯಕ್ಷಮತೆಗೆ ಸಂಸ್ಥೆ ಸದಾ ಒತ್ತು ನೀಡುತ್ತಾ ಬಂದಿದೆ. ಉತ್ಕೃಷ್ಟತೆಗೆ ಹೆಸರಾದ ಈ ಸಂಸ್ಥೆಯನ್ನು ರಾಷ್ಟ್ರೀಯ ಪ್ರಾಮುಖ್ಯತಾ ಸಂಸ್ಥೆಯಾಗಿ ಘೋಷಿಸಲಾಗಿದೆ ಎಂದು ಹೇಳಿದರು.
ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ನಿನ್ನೆ ಸಂಜೆ ಬೆಂಗಳೂರಿನಿಂದ ಚೆನ್ನೈಗೆ ತೆರಳಿದರು.
ಹಿಂದೂಸ್ತಾನ್ ಸಮಾಚಾರ್
