ಗಾಂಧಿನಗರ, 10 ಜನವರಿ(ಹಿ.ಸ):
ಆ್ಯಂಕರ್ :
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯ ಹತ್ತನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ನಿನ್ನೆ ಅವರು ಗಾಂಧಿನಗರದಲ್ಲಿ ಮೊಜಾಂಬಿಕ್ ಅಧ್ಯಕ್ಷ ಫಿಲಿಪ್ ನ್ಯುಸಿ, ಟಿಮೋರ್ ಲೆಸ್ಟೆ ಅಧ್ಯಕ್ಷ ಜೋಸ್ ರಾಮೋಸ್-ಹೋರ್ಟಾ ಮತ್ತು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಉಪಸ್ಥಿತಿಯಲ್ಲಿ ವೈಬ್ರೆಂಟ್ ಗುಜರಾತ್ ಗ್ಲೋಬಲ್ ವ್ಯಾಪಾರ ಮೇಳ ಉದ್ಘಾಟಿಸಿದರು. ಈ ಟ್ರೇಡ್ ಶೋ ಭಾರತದ ಅತಿದೊಡ್ಡ ಜಾಗತಿಕ ವ್ಯಾಪಾರ ಪ್ರದರ್ಶನವಾಗಿದೆ ಎಂದು ನಮ್ಮ ಪ್ರತಿನಿಧಿ ವರದಿ ಮಾಡಿದ್ದಾರೆ. ಐದು ದಿನಗಳ ವ್ಯಾಪಾರ ಪ್ರದರ್ಶನದಲ್ಲಿ ಒಟ್ಟು ೧೦೦ ದೇಶಗಳು ಭಾಗವಹಿಸುತ್ತಿದ್ದು, ೩೩ ದೇಶಗಳು ಪಾಲುದಾರರಾಗಿ ಸೇರ್ಪಡೆಗೊಂಡಿವೆ. ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ಸಿಂಗಾಪುರ, ಯುಎಇ, ಯುಕೆ, ಜರ್ಮನಿ ಮತ್ತು ನಾರ್ವೆ ಸೇರಿದಂತೆ ೨೦ ದೇಶಗಳನ್ನು ಪ್ರತಿನಿಧಿಸುವ ಸಂಶೋಧನಾ ವಲಯದ ೧,೦೦೦ ಕ್ಕೂ ಅಧಿಕ ಪ್ರದರ್ಶಕರು ವ್ಯಾಪಾರ ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದಾರೆ. ಈ ವ್ಯಾಪಾರ ಮೇಳದಲ್ಲಿ ಎಲೆಕ್ಟ್ರಿಕ್ ವಾಹನಗಳು, ಹಸಿರು ಹೈಡ್ರೋಜನ್, ನವೀಕರಿಸಬಹುದಾದ ಶಕ್ತಿ, ಅರೆವಾಹಕಗಳು ಮತ್ತು ಸೈಬರ್ ಸುರಕ್ಷತೆಯ ಮೇಲೆ ಹೆಚ್ಚಿನ ಗಮನಹರಿಸಲಾಗುತ್ತಿದೆ. ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ, ಮೊಜಾಂಬಿಕ್ ಮತ್ತು ಟಿಮೋರ್ ಲೆಸ್ಟೆ ಅಧ್ಯಕ್ಷರೊಂದಿಗೆ ಸಭೆಗಳನ್ನು ನಡೆಸಿದರು ಮತ್ತು ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ವೃದ್ಧಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿದರು. ಮೈಕ್ರೋನ್ ಟೆಕ್ನಾಲಜಿಯ ಅಧ್ಯಕ್ಷ ಮತ್ತು ಸಿಇಒ ಸಂಜಯ್ ಮೆಹ್ರೋತ್ರಾ, ಸುಜುಕಿ ಮೋಟಾರ್ ಕಾರ್ಪೊರೇಷನ್ನ ಪ್ರತಿನಿಧಿ ನಿರ್ದೇಶಕ ಮತ್ತು ಅಧ್ಯಕ್ಷ ತೋಶಿಹಿರೊ ಸುಜುಕಿ ಸೇರಿದಂತೆ ಉನ್ನತ ಜಾಗತಿಕ ಸಿಇಒಗಳೊಂದಿಗೆ ಪ್ರಧಾನ ಮಂತ್ರಿ ಸಭೆ ನಡೆಸಿದರು. ಸೆಮಿಕಂಡಕ್ಟರ್ಗಳು, ಆಟೋಮೋಟಿವ್, ಗ್ರೀನ್ ಪೋರ್ಟ್ಗಳಂತಹ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಿದರು. ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಸರ್ದಾರ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಹಮದಾಬಾದ್ನಿಂದ ಗಾಂಧಿನಗರದವರೆಗೆ ರೋಡ್ಶೋ ನಡೆಸಿದರು. ಉಭಯ ನಾಯಕರ ಸಮಕ್ಷಮದಲ್ಲಿ ಭಾರತ ಮತ್ತು ಯುಎಇ ನಡುವೆ ಹಲವು ಒಪ್ಪಂದಗಳಿಗೆ ಸಹಿ ಹಾಕಿದವು.
ಹಿಂದೂಸ್ತಾನ್ ಸಮಾಚಾರ್
