
ನವದಹೆಲಿ, 29 ನವೆಂಬರ್ (ಹಿ.ಸ):
ಆ್ಯಂಕರ್ :
ಪ್ರಧಾನಿ ನರೇಂದ್ರ ಮೋದಿ ನಾಳೆ ೩೦ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನೂತನವಾಗಿ ಉದ್ಯೋಗಕ್ಕೆ ಸೇರ್ಪಡೆಗೊಂಡ ೫೧ ಸಾವಿರಕ್ಕೂ ಹೆಚ್ಚು ಮಂದಿಗೆ ನೇಮಕಾತಿ ಪತ್ರ ವಿತರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು, ಹೊಸದಾಗಿ ನೇಮಕಾತಿ ಹೊಂದಿದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ದೇಶದ ೩೭ ಸ್ಥಳಗಳಲ್ಲಿ ಉದ್ಯೋಗ ಮೇಳವು ನಡೆಯಲಿದೆ. ಈ ಉಪಕ್ರಮವನ್ನು ಬೆಂಬಲಿಸಿ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ್ಯಂತ ನೇಮಕಾತಿಗಳು ನಡೆಯುತ್ತಿವೆ. ದೇಶಾದ್ಯಂತ ಆಯ್ಕೆಗೊಂಡು ನೇಮಕಾತಿ ಹೊಂದಿರುವವರು ರೈಲ್ವೆ ಸಚಿವಾಲಯ, ಅಂಚೆ ಇಲಾಖೆ, ಗೃಹ ಸಚಿವಾಲಯ, ಕಂದಾಯ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸೇರಿದಂತೆ ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳಲ್ಲಿ ಸೇರ್ಪಡೆಗೊಳ್ಳಲಿದ್ದಾರೆ. ಹೊಸದಾಗಿ ಸೇರ್ಪಡೆಗೊಂಡವರು ಕರ್ಮಯೋಗಿ ಪ್ರಾರಂಭ್ ಮೂಲಕ ತರಬೇತಿ ಪಡೆಯುವ ಅವಕಾಶ ಪಡೆಯಲಿದ್ದಾರೆ. ಆನ್ಲೈನ್ ಮಾಡ್ಯೂಲ್ ಆಗಿರುವ ಕರ್ಮಯೋಗಿ ಪ್ರಾರಂಭ್ ಪೋರ್ಟಲ್ ೭೫೦ಕ್ಕೂ ಹೆಚ್ಚು ಇ-ಲರ್ನಿಂಗ್ ಕೋರ್ಸ್ಗಳನ್ನು ಹೊಂದಿದೆ. ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ಕಲ್ಪಿಸುವ ಪ್ರಧಾನಮಂತ್ರಿ ಮೋದಿ ಅವರ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ರೋಜ್ಗಾರ್ ಮೇಳವು ಒಂದು ಹೆಜ್ಜೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್
