ನವದೆಹಲಿ, 31ಅಕ್ಟೋಬರ್ (ಹಿ.ಸ):
ಆ್ಯಂಕರ್ :
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಕರ್ತವ್ಯ ಪಥದಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಮೃತ ಕಲಶ ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭವಾಗಿದೆ. ನನ್ನ ಮಣ್ಣು ನನ್ನ ದೇಶ ಅಭಿಯಾನವು ದೇಶಕ್ಕಾಗಿ ಅತ್ಯುನ್ನತ ತ್ಯಾಗ ಬಲಿದಾನಗೈದ ವೀರರು ಮತ್ತು ವೀರಾಂಗನೆಯರಿಗೆ ಸಲ್ಲಿಸುವ ಗೌರವವಾಗಿದೆ.
ಕಾರ್ಯಕ್ರಮದಲ್ಲಿ ಪ್ರಧಾನಿಯವರು ಅಮೃತ ವಾಟಿಕಾ ಮತ್ತು ಅಮೃತ ಮಹೋತ್ಸವ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ. ಹಾಗೂ ಸಾವಿರಾರು ಅಮೃತ ಕಲಶ ಯಾತ್ರಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೇ ವೇಳೆ ಪ್ರಧಾನಿಯವರು ದೇಶದ ಯುವಕರಿಗಾಗಿ ’ಮೇರಾ ಯುವ ಭಾರತ್ (ಒಙ ಭಾರತ್) ವೇದಿಕೆಗೆ ಚಾಲನೆ ನೀಡಲಿದ್ದಾರೆ.
ನನ್ನ ಮಣ್ಣು ನನ್ನ ದೇಶ ಅಭಿಯಾನವು ೩೬ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿರ್ಮಿಸಲಾದ ೨.೩ ಲಕ್ಷಕ್ಕೂ ಹೆಚ್ಚು ಶಿಲಾಫಲಕಗಳು, ಸುಮಾರು ನಾಲ್ಕು ಕೋಟಿ ಪಂಚಪ್ರಾಣ ಪ್ರತಿಜ್ಞೆ ಸೆಲ್ಫಿಗಳನ್ನು ಅಪ್ಲೋಡ್ ಮಾಡುವುದರೊಂದಿಗೆ ಮತ್ತು ಎರಡು ಲಕ್ಷ ವೀರರಿಗೆ ವಂದನೆ ಕಾರ್ಯಕ್ರಮಗಳನ್ನು ರಾಷ್ಟ್ರವ್ಯಾಪಿ ಆಯೋಜಿಸುವುದರೊಂದಿಗೆ ಯಶಸ್ವಿಯಾಯಿತು.
೩೬ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ನನ್ನ ಮಣ್ಣು ನನ್ನ ದೇಶ ಸಮಾಪನ ಸಮಾರಂಭದಲ್ಲಿ ಭಾಗವಹಿಸಲು ರಾಷ್ಟ್ರ ರಾಜಧಾನಿಯನ್ನು ತಲುಪಿದ್ದಾರೆ.
ನಿನ್ನೆ ಕರ್ತವ್ಯ ಪಥದಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನ ಕುರಿತ ಒಂದು ದಿನದ ಕಾರ್ಯಕ್ರಮ ನಡೆಯಿತು. ಮಣ್ಣು ತುಂಬಿದ ಕಲಶಗಳನ್ನು ಹೊತ್ತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಒಂದು ಬೃಹತ್ ಅಮೃತ ಕಲಶಕ್ಕೆ ಮಣ್ಣನ್ನು ಸುರಿದು ಏಕ ಭಾರತ ಶ್ರೇಷ್ಠ ಭಾರತ ಪರಿಕಲ್ಪನೆಯನ್ನು ಪ್ರತಿಬಿಂಬಿಸಿದರು.
ನಿನ್ನೆ ಸಂಜೆ ಹಿಮಾಚಲ ಪ್ರದೇಶದ ಪ್ರತಿನಿಧಿಗಳೊಂದಿಗೆ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಮೃತ ಕಲಶಕ್ಕೆ ಮಣ್ಣನ್ನು ಸುರಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕೂರ್, ಆರು ಲಕ್ಷಕ್ಕೂ ಹೆಚ್ಚು ಹಳ್ಳಿಗಳ ಕೋಟ್ಯಂತರ ಯುವಕರು ನನ್ನ ಮಣ್ಣು ನನ್ನ ದೇಶ ಅಭಿಯಾನದಲ್ಲಿ ಪಾಲ್ಗೊಂಡು ಪ್ರತಿ ಮನೆಯಿಂದ ಮಣ್ಣು ಸಂಗ್ರಹಿಸಿದ್ದು, ದೇಶದ ಯುವಕರು ೨೦೪೭ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲಿದ್ದಾರೆ ಎಂದರು.
ಹಿಂದೂಸ್ತಾನ್ ಸಮಾಚಾರ್
