ನವದೆಹಲಿ, 05 ನವೆಂಬರ್ (ಹಿ.ಸ.) :
ಆ್ಯಂಕರ್ : ದೇಶದ ನಾನಾ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ತೋರಿದ ಗಣ್ಯರನ್ನು ಗುರುತಿಸಲು ಡಾ. ಮಂಗಳಂ ಸ್ವಾಮಿನಾಥನ್ ಫೌಂಡೇಶನ್ ಈ ವರ್ಷ 8ನೇ ಆವೃತ್ತಿಯ “ರಾಷ್ಟ್ರೀಯ ಶ್ರೇಷ್ಠತಾ ಪ್ರಶಸ್ತಿಗಳು 2025” ವಿಜೇತರ ಪಟ್ಟಿಯನ್ನು ಬುಧವಾರ ಪ್ರಕಟಿಸಿದೆ. ಪ್ರತಿವರ್ಷ ಪ್ರದಾನವಾಗುವ ಈ ಪ್ರತಿಷ್ಠಿತ ಪ್ರಶಸ್ತಿಯು ₹1 ಲಕ್ಷ ನಗದು ಬಹುಮಾನ, ಸ್ಮಾರಕ ಫಲಕ ಹಾಗೂ ಗೌರವ ಒಳಗೊಂಡಿದೆ.
ಈ ಕುರಿತು ಫೌಂಡೇಶನ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ಟ್ರಸ್ಟಿ ಆರ್. ಬಾಲಶಂಕರ್ ಮಾಹಿತಿ ನೀಡಿದ್ದು “ಈ ಬಾರಿ ದೇಶದಾದ್ಯಂತ 1,000 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಯಿತು. ತಜ್ಞರ ಸಮಿತಿಯು ನೈತಿಕತೆ, ಸಾಮಾಜಿಕ ಪ್ರಭಾವ ಮತ್ತು ಕಾರ್ಯದ ಶ್ರೇಷ್ಠತೆಯನ್ನು ಆಧಾರ ಮಾಡಿಕೊಂಡು ವಿಜೇತರ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ..
ಪತ್ರಿಕೋದ್ಯಮ ವಿಭಾಗದಲ್ಲಿ ನಿಷ್ಠೆಗೆ ಗೌರವ
ಪತ್ರಿಕೋದ್ಯಮ ಕ್ಷೇತ್ರದಲ್ಲಿ ನೈತಿಕ ವರದಿಗಾರಿಕೆ ಮತ್ತು ಸಾಮಾಜಿಕ ಜವಾಬ್ದಾರಿತ್ವ ತೋರಿದ ಇಬ್ಬರು ಪತ್ರಕರ್ತರಿಗೆ “ಎಕ್ಸಲೆನ್ಸ್ ಇನ್ ಜರ್ನಲಿಸಂ” ಪ್ರಶಸ್ತಿಯನ್ನು ನೀಡಲಾಗಿದೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ಉಪ ಸಂಪಾದಕಿ ಲಿಜ್ ಮ್ಯಾಥ್ಯೂ ಅವರು ಪಕ್ಷಪಾತವಿಲ್ಲದ ರಾಜಕೀಯ ವರದಿಗಾರಿಕೆ ಮತ್ತು ನಿಖರ ವಿಶ್ಲೇಷಣೆಗಾಗಿ ಪ್ರಶಸ್ತಿ ಪಡೆದಿದ್ದಾರೆ.
ಪಿಟಿಐ ಮುಖ್ಯ ವರದಿಗಾರ್ತಿ ಉಜ್ಮಿ ಅಥರ್ ಅವರು ಪರಿಸರ, ಹವಾಮಾನ ಬದಲಾವಣೆ ಮತ್ತು ವಿಜ್ಞಾನ-ತಂತ್ರಜ್ಞಾನ ವಿಷಯಗಳ ಕುರಿತು ಪ್ರಭಾವಶಾಲಿ ವರದಿಗೆ ಗೌರವಿಸಲ್ಪಟ್ಟಿದ್ದಾರೆ.
ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಸಾಗರಿ ಛಾಬ್ರಾ ಗೌರವ
ಬರಹಗಾರ್ತಿ ಹಾಗೂ ಚಲನಚಿತ್ರ ನಿರ್ದೇಶಕಿ ಸಾಗರಿ ಛಾಬ್ರಾ ಅವರನ್ನು ಸ್ವಾತಂತ್ರ್ಯ ಹೋರಾಟದ ಕಾಣದ ಅಧ್ಯಾಯಗಳು ಮತ್ತು ಮರೆಮಾಚಿದ ವೀರರ ಕುರಿತ ಸಂಶೋಧನಾ ಕಾರ್ಯಕ್ಕಾಗಿ ಕಲೆ ಮತ್ತು ಸಂಸ್ಕೃತಿ ವಿಭಾಗದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವಿಜ್ಞಾನ ವರದಿ ವಿಭಾಗ – ಬಿಜು ಪಂಕಜ್‌ಗೌರವ
ಕೇರಳದ ಮಾತೃಭೂಮಿ ನ್ಯೂಸ್ ಸಹಾಯಕ ಸಂಪಾದಕ ಬಿಜು ಪಂಕಜ್ ಅವರಿಗೆ ಪರಿಸರ ಸಂರಕ್ಷಣೆ ಮತ್ತು ಅರಣ್ಯ ನಷ್ಟದ ಕುರಿತಾದ ಪ್ರಭಾವಶಾಲಿ ಸಾಕ್ಷ್ಯಚಿತ್ರಕ್ಕಾಗಿ ವಿಜ್ಞಾನ ವರದಿ ವಿಭಾಗದ ವಿಶೇಷ ಪ್ರಶಸ್ತಿ ದೊರೆತಿದೆ.
ವೈದ್ಯಕೀಯ ತನಿಖಾ ವರದಿಗೆ ವಿ.ಎಸ್. ರಾಜೇಶ್ ಗೌರವ
ಕೇರಳ ಕೌಮುದಿಯ ಮುಖ್ಯ ಸುದ್ದಿ ಸಂಪಾದಕ ವಿ.ಎಸ್. ರಾಜೇಶ್ ಅವರು ವೈದ್ಯಕೀಯ ವಲಯದ ಅಕ್ರಮ ಮತ್ತು ಆಸ್ಪತ್ರೆ–ಸ್ಟೆಂಟ್ ಪೂರೈಕೆದಾರರ ನಡುವಿನ ಲಾಭದ ಒಪ್ಪಂದವನ್ನು ಬಹಿರಂಗಪಡಿಸಿದ ತನಿಖಾ ವರದಿಗಾಗಿ ಪ್ರಶಸ್ತಿ ಪಡೆದಿದ್ದಾರೆ. ಅವರ ವರದಿಯ ಪರಿಣಾಮವಾಗಿ ಕೇಂದ್ರ ಸರ್ಕಾರವು ಸ್ಟೆಂಟ್ ಬೆಲೆ ಕಡಿತಗೊಳಿಸಿತ್ತು.
ಸಾಮಾಜಿಕ ಸೇವಾ ವಿಭಾಗದಲ್ಲಿ ಆಚಾರ್ಯ ಮನೋಜ್ ಹಾಗೂ ಆಶಿಶ್ ಗೌತಮ್ ಸನ್ಮಾನ
“ಶ್ರೀ ದತ್ತೋಪಂತ್ ಠೇಂಗಡಿ ಸೇವಾ ಸಮ್ಮಾನ್” ಪ್ರಶಸ್ತಿಯನ್ನು ಈ ವರ್ಷ ಆರ್ಷ ವಿದ್ಯಾ ಸಮಾಜದ ಸಂಸ್ಥಾಪಕ ಆಚಾರ್ಯ ಕೆ.ಆರ್. ಮನೋಜ್ ಮತ್ತು ದಿವ್ಯ ಪ್ರೇಮ್ ಸೇವಾ ಮಿಷನ್ ಅಧ್ಯಕ್ಷ ಆಶಿಶ್ ಗೌತಮ್ ಅವರಿಗೆ ನೀಡಲಾಗುತ್ತದೆ. ಇವರಿಬ್ಬರೂ ನಿರ್ಗತಿಕರ ಉನ್ನತಿ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ.
ಪ್ರವಾಸಿ ಭಾರತೀಯ ಪ್ರಶಸ್ತಿ – ಪಂಬವಾಸನ್ ನಾಯರ್‌ಗೆ
ಬಹ್ರೇನ್ ಮತ್ತು ಸೌದಿ ಅರೇಬಿಯಾದ ಅಮದ್ ಗ್ರೂಪ್ ಅಧ್ಯಕ್ಷ ಪಂಬವಾಸನ್ ನಾಯರ್ ಅವರಿಗೆ ಪ್ರವಾಸಿ ಭಾರತೀಯ ಶ್ರೇಷ್ಠತಾ ಪ್ರಶಸ್ತಿ ದೊರೆತಿದೆ. ಅವರು ವಿದೇಶದಲ್ಲಿ ವಾಸಿಸುತ್ತಿದ್ದರೂ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 29, 2025 ರಂದು ನವದೆಹಲಿಯ ಸಂಸದ್ ಮಾರ್ಗದಲ್ಲಿರುವ ಎನ್‌ಡಿಎಂಸಿ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ. ದೇಶದ ಪ್ರಮುಖ ನಾಯಕರು, ಅಕಾಡೆಮಿಕ್ ವಲಯದ ಗಣ್ಯರು ಮತ್ತು ಸಾಮಾಜಿಕ ಚಟುವಟಿಕಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಡಾ. ಬಾಲಶಂಕರ್ ಹೇಳಿದ್ದಾರೆ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
