ನವದೆಹಲಿ, 5 ನವೆಂಬರ್ (ಹಿ.ಸ):
ಆ್ಯಂಕರ್ :
ಗಾಜಾದಲ್ಲಿ 5 ಸಾವಿರ ಮಕ್ಕಳ ಹತ್ಯೆ ನಡೆದಿದೆ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿಕೆ ನೀಡಿದ್ದು, ಕದನ ವಿರಾಮಕ್ಕೆ ಮನವಿ ಮಾಡಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧವು ಜಗತ್ತನ್ನು ಬೆಚ್ಚಿಬೀಳಿಸಿದೆ. ಪತ್ರಿಕೆಗಳು ಮತ್ತು ಟಿವಿ ನ್ಯೂಸ್ ಚಾನೆಲ್ಗಳು ಎಲ್ಲಾ ಕಡೆಯೂ ಯುದ್ಧದ ಭೀಕರತೆಯ ಚಿತ್ರಗಳೇ ತುಂಬಿ ಹೋಗಿವೆ.
ಈ ಹತ್ಯಾಕಾಂಡವನ್ನು ತಡೆಯಲು ಎಲ್ಲಾ ಕಡೆಯಿಂದ ಮನವಿ ಮಾಡಲಾಗುತ್ತಿದೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ ಎರಡೂ ಕಡೆ ಹತ್ಯಾಕಾಂಡವನ್ನು ನಿಲ್ಲಿಸುವಂತೆ ಕರೆ ನೀಡಿದ್ದಾರೆ. ಈ ಯುದ್ಧಕ್ಕೆ ಕದನ ವಿರಾಮವೊಂದೇ ಪರಿಹಾರ, ಇಲ್ಲದಿದ್ದರೆ ಏನೂ ಉಳಿಯುವುದಿಲ್ಲ ಎಂದಿದ್ದಾರೆ.
ಗಾಜಾದಲ್ಲಿ 5000 ಕ್ಕೂ ಹೆಚ್ಚು ಮಕ್ಕಳು ಸೇರಿ ಸುಮಾರು 10,000 ಜನರನ್ನು ಹತ್ಯೆ ಮಾಡಲಾಗಿದೆ. ಇದು ತುಂಬಾ ನಾಚಿಕೆಗೇಡಿನ ಸಂಗತಿ, ಕುಟುಂಬಗಳು ನಾಶವಾಗಿವೆ.ಆಸ್ಪತ್ರೆಗಳು ಮತ್ತು ಆಂಬ್ಯುಲೆನ್ಸ್ಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ಇದಕ್ಕೂ ಮುನ್ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಗಾಜಾದಲ್ಲಿ ಶಾಂತಿ ಕಾಪಾಡುವ ಕುರಿತು ಭಾರತ ಮತದಾನದಿಂದ ದೂರ ಉಳಿದಿರುವ ಬಗ್ಗೆ ಪ್ರಿಯಾಂಕಾ ಅಸಮಾಧಾನ ವ್ಯಕ್ತಪಡಿಸಿದ್ದರು.
ಹಿಂದೂಸ್ತಾನ್ ಸಮಾಚಾರ್
